Site icon Vistara News

Modi Rally : ತೆಲಂಗಾಣ ಮಂದಿಗೆ ಡಬಲ್‌ ಎಂಜಿನ್‌ ಅಭಿವೃದ್ಧಿ ಹಂಬಲ

modi rally

ಹೈದರಾಬಾದ್‌: ತೆಲಂಗಾಣದ ಮಂದಿ ಬಿಜೆಪಿಯ ಗೆಲುವಿನೊಂದಿಗೆ ʼಡಬಲ್‌ ಎಂಜಿನ್‌ ಅಭಿವೃದ್ಧಿʼಮಾದರಿ ತಮ್ಮ ರಾಜ್ಯದಲ್ಲೂ ಬರಲಿ ಎಂದು ಹಂಬಲಿಸುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೈದರಾಬಾದ್‌ನಲ್ಲಿ ಭಾನುವಾರ ಸಂಜೆ ನಡೆದ ಬೃಹತ್‌ (Modi Rally) ರ‍್ಯಾಲಿಯನ್ನುದ್ದೇಶಿಸಿ ಹೇಳಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಬಳಿಕ ಅವರು ಹೈದರಾಬಾದ್‌ನ ಪರೇಡ್‌ ಮೈದಾನದಲ್ಲಿ ಜಮಾಯಿಸಿದ್ದ ಬೃಹತ್‌ ಸಂಖ್ಯೆಯ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ “ಬಿಜೆಪಿ ಸರಕಾರ ರಾಜ್ಯದಲ್ಲಿ ರಚನೆಯಾದರೆ ಆಗುವ ಅಭಿವೃದ್ಧಿಯ ಕನಸು ಕಂಡಿರುವ ತೆಲಂಗಾಣದ ಜನರು, ಡಬಲ್‌ ಎಂಜಿನ್‌ ಸರಕಾರ ಬಯಸುತ್ತಿದ್ದಾರೆ,ʼʼ ಎಂದು ಹೇಳಿದರು. ಈ ಮೂಲಕ ಅವರು ೨೦೩ರ ತೆಲಂಗಾಣದ ವಿಧಾನ ಸಭೆ ಚುನಾವಣೆಗೆ ರಣ ಕಹಳೆ ಊದಿದರು.

“ಡಬಲ್‌ ಎಂಜಿನ್‌ ಸರ್ಕಾರ ರಚನೆಯಿಂದ ರಾಜ್ಯದ ಎಲ್ಲ ನಗರಗಳು ಅಭಿವೃದ್ಧಿ ಕಾಣಲಿವೆ,ʼʼ ಎಂದು ಆಶ್ವಾಸನೆ ನೀಡಿದ ಪ್ರಧಾನಿ ಮೋದಿ ಅವರು, ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಜನಸ್ತೋಮದ ಮುಂದೆ ರುಜುವಾತುಪಡಿಸಿದರು.

ಎಲ್ಲರ ಅಭಿವೃದ್ಧಿ

ತೆಲಂಗಾಣದ ಮಂದಿ ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವುದಕ್ಕೆ ಹಾದಿ ಮಾಡಿಕೊಡುವ ಭರವಸೆ ವ್ಯಕ್ತಪಡಿಸಿದ ಮೋದಿ ಅವರು, ಕೇಂದ್ರ ಸರ್ಕಾರ ಬಡವರು ಹಾಗೂ ಬುಡಕಟ್ಟು ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಪಟ್ಟಿಯನ್ನು ಕಾರ್ಯಕರ್ತರ ಮುಂದೆ ತೆರೆದಿಟ್ಟರು.

“ಬಿಜೆಪಿ ಇಲ್ಲಿ ಕೇವಲ ದೊಡ್ಡದೊಡ್ಡ ಯೋಜನೆಗಳನ್ನು ಮಾತ್ರ ಘೋಷಣೆ ಮಾಡುತ್ತಿಲ್ಲ. ತೆಲಂಗಾಣದ ಬಡ ಹಾಗೂ ಅಶಕ್ತ ಸಹೋದರ, ಸಹೋದರರಿಯರಿಗೆ ಸಂಪನ್ಮೂಲ ಕಲ್ಪಿಸುವ ಕೆಲಸವನ್ನೂ ಮಾಡುತ್ತಿದೆ. ಅಂತೆಯೇ ತೆಲಂಗಾಣದ ರೈತರ ಏಳಿಗೆಗೂ ಶ್ರಮಿಸುತ್ತಿದೆ,ʼʼ ಎಂದು ಹೇಳಿದರು.

ಏತನ್ಮಧ್ಯೆ ಅವರು ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ತೆಲಂಗಾಣದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿಗಳ ಪ್ರಮಾಣವನ್ನು ವಿವರಿಸಿದರು.

ಕಲೆಗಳ ನಾಡು

ತೆಲಂಗಾಣದ ಜನರು ಶ್ರಮಿಕರು. ಇಲ್ಲಿನ ಜನರು ಕಲೆ ಹಾಗೂ ಸಂಸ್ಕೃತಿಗಳಿಂದ ಸಂಪದ್ಭರಿತರು. ಇಲ್ಲಿನ ಕಲಾ ವೈಶಿಷ್ಟ್ಯ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಮೋದಿ ಅವರು ಭಾಷಣದುದ್ದಕ್ಕೂ ತೆಲಂಗಾಣದ ಜನರನ್ನು ಹೊಗಳುತ್ತಾ ಅವರ ಮನಸ್ಸು ಗೆಲ್ಲುವ ಯತ್ನ ನಡೆಸಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾತನಾಡಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ವಿರುದ್ಧ ಮಾತಿನ ಚಾಟಿ ಬೀಸಿದರು. “ಕೆಸಿಆರ್‌ ಅವರಿಗೆ ನಿಮ್ಮ ಬಗ್ಗೆ ಯಾವುದೇ ಕಾಳಜಿ ಇಲ್ಲ. ನಿಮ್ಮ ಜೀವನೋಪಾಯದ ಕಷ್ಟ ಅವರಿಗೆ ದೊಡ್ಡ ಸಂಗತಿಯಲ್ಲ. ತಮ್ಮ ಪುತ್ರನನ್ನು ಸಿಎಂ ಮಾಡುವುದೇ ಅವರ ಏಕೈಕ ಗುರಿ,ʼʼ ಎಂದರು.

ಇದನ್ನೂ ಓದಿ: BJP Executive | ಅಗ್ನಿಪಥ, ಗತಿಶಕ್ತಿ ಯೋಜನೆಗೆ ಕಾರ್ಯಕಾರಿಣಿ ಪ್ರಶಂಸೆ, ಇಂದು ಪ್ರಧಾನಿ ಮೋದಿ ಭಾಷಣ

Exit mobile version