Site icon Vistara News

ಕೇರಳದ ಈ ದೇವಾಲಯದಲ್ಲಿ ಸಂವಿಧಾನವೇ ದೇವರು!

constitution temple

ತಿರುವನಂತಪುರಂ: ಇದೊಂದು ವಿಶಿಷ್ಟ ದೇವಾಲಯ. ಇಲ್ಲಿ ಪೂಜೆಯಿದೆ, ಆದರೆ ದೇವತೆಗಳಿಲ್ಲ. ಅದರ ಬದಲಾಗಿ ಸಂವಿಧಾನ ಇದೆ.

ಹೌದು, ಕೇರಳದ ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಭಾರತೀಯ ಸಂವಿಧಾನವನ್ನು ಪೂಜಿಸುವ ವಿಶಿಷ್ಟ ದೇಗುಲವನ್ನು ತಿರುವನಂತಪುರದಲ್ಲಿ ನಿರ್ಮಿಸಿದ್ದಾರೆ. ಇವರ ಹೆಸರು ಶಿವದಾಸನ್ ಪಿಳ್ಳೈ (71).

ಇಲ್ಲಿನ ಮುಖ್ಯ ದೇವತೆ ಭಾರತದ ಸಂವಿಧಾನ. ಜತೆಗೆ ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ, ಮಲಾಲ ಯೂಸುಫ್‌ಜಾಯ್‌ ಅವರ ಫೋಟೋಗಳೂ ಇವೆ. ಬೇರೆ ದೇವಾಲಯಗಳಂತೆ ಇಲ್ಲಿಯೂ ನಿತ್ಯ ನಂದಾದೀಪ ಬೆಳಗಲಾಗುತ್ತದೆ. ಈ ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುವ ಭಕ್ತರು ಎಂದರೆ ವಿದ್ಯಾರ್ಥಿಗಳು.

“ನನ್ನ ದೇವರು ಸಂವಿಧಾನ, ನಾನು ಅದನ್ನು ಪೂಜಿಸುತ್ತೇನೆ. ಇದು ನಮ್ಮ ದೇಶ. ನಮ್ಮ ಸಹೋದರತ್ವ ಮತ್ತು ವೈವಿಧ್ಯತೆ ಇಲ್ಲಿನ ಭವಿಷ್ಯದ ಆಧಾರವಾಗಿದೆ. ನಾನು ನನ್ನ ದೇವರ ಆದರ್ಶಗಳನ್ನು ಪಾಲನೆ ಮಾಡಲು ಬಯಸುತ್ತೇನೆ. ಆದ್ದರಿಂದ ನಾನು ದೇವಾಲಯ ನಿರ್ಮಿಸಿದ್ದೇನೆʼʼ ಎಂದು ಪಿಳ್ಳೈ ಹೇಳುತ್ತಾರೆ. ಒಂದು ವರ್ಷದ ಹಿಂದೆ ಕೊಡಪನಕುನ್ನುನಲ್ಲಿರುವ ತಮ್ಮ ಮನೆಯ ಪಕ್ಕದಲ್ಲೇ “ಭರಣಘಟನಾ ಸ್ಕೇತ್ರಂʼ (ಸಂವಿಧಾನ ದೇವಾಲಯ)” ನಿರ್ಮಿಸಿದರು.

ದೇವಸ್ಥಾನಕ್ಕೆ ಭೇಟಿ ನೀಡುವ ಜನರಿಗೆ ಅವರು ‘ಪ್ರಸಾದ’ವನ್ನೂ ನೀಡುತ್ತಾರೆ. ʻಸಂವಿಧಾನವೇ ದೇವರು, ಅದೇ ಈ ಮನೆಯ ಸಂಪತ್ತುʼ ಎಂದು ಬರೆದಿರುವ ಒಂದು ಸ್ಟಿಕ್ಕರ್‌ ಪ್ರಸಾದವಾಗಿ ಸಿಗುತ್ತದೆ. ಈ ಚಿಕ್ಕ ದೇಗುಲವು ಮೂರು ಸೆಂಟ್ಸ್ ಭೂಮಿಯಲ್ಲಿದೆ. ದೇವಾಲಯದ ಗೋಡೆಯ ಮೇಲೆ ಸಂವಿಧಾನದ ಪೀಠಿಕೆಯನ್ನು ಕೆತ್ತಲಾಗಿದೆ.

“ಹೊಸ ಪೀಳಿಗೆಗೆ ನಮ್ಮ ಸಂವಿಧಾನದ ಬಗ್ಗೆ ಅರಿವಿಲ್ಲ. ಅವರಲ್ಲಿ ಸಂವಿಧಾನದ ಆಶಯವನ್ನು ಮೈಗೂಡಿಸುವುದು ನನ್ನ ಸಣ್ಣ ಪ್ರಯತ್ನ. ನಾವು ಸಂವಿಧಾನದ ಆಶಯವನ್ನು ಎತ್ತಿ ಹಿಡಿದರೆ, ಈ ದೇಶದಲ್ಲಿ ಯಾವುದೇ ಕಲಹಗಳು ಇರಲಾರದು. ನಾವು ಉತ್ತಮ ನಾಗರಿಕರನ್ನು ರೂಪಿಸಬೇಕು. ನಮ್ಮದು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆʼʼ ಎಂದು ಪಿಳ್ಳೈ ಹೇಳುತ್ತಾರೆ. ಅವರು ಸದಾ ಮಕ್ಕಳಿಗೆ ಸಂವಿಧಾನದ ಮಹತ್ವ ಮತ್ತು ಪ್ರಮುಖ ಲಕ್ಷಣಗಳನ್ನು ವಿವರಿಸುತ್ತಿರುತ್ತಾರೆ. ಸಂವಿಧಾನವನ್ನು ನಿಯಮಿತವಾಗಿ ಮಕ್ಕಳಿಗೆ ಸರಳ ಪದಗಳಲ್ಲಿ ವಿವರಿಸುತ್ತಾರೆ. ಪ್ರಚಾರದಿಂದ ದೂರವಿದ್ದಾರೆ.

ಈ ಮಧ್ಯೆ, ಸಂವಿಧಾನವನ್ನು ಅವಮಾನಿಸಿದ ವಿವಾದಕ್ಕೆ ಒಳಗಾಗಿರುವ, ಮಾಜಿ ಸಚಿವ ಶಾಜಿ ಚೆರಿಯನ್‌ ಅವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂಬತ್ತು ದೂರುಗಳು ದಾಖಲಾಗಿವೆ.

ಇದನ್ನೂ ಓದಿ: Saji cheriyan: ಸಂವಿಧಾನ ಅಗೌರವಿಸಿದ ಕೇರಳ ಸಚಿವ ರಾಜೀನಾಮೆ

Exit mobile version