ಚೆನ್ನೈ: ಭಾರತದಲ್ಲಿ ಸಮಾನತೆ, ಮೇಲು-ಕೀಳು ಜಾತಿ ಎಂಬ ಕುತ್ಸಿತ ಮನಸ್ಥಿತಿ, ಜಾತಿ ಹೆಸರಿನಲ್ಲಿ ಭೇದ-ಭಾವ ಮಾಡುವುದು ನಡೆಯುತ್ತಲೇ ಇರುತ್ತದೆ. ದೇಶವು ಶೈಕ್ಷಣಿಕ, ವೈಜ್ಞಾನಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದರೂ, ಜಾತಿ ಹೆಸರಿನಲ್ಲಿ ವಿಕ್ಷಿಪ್ತ ಮನಸ್ಸುಗಳು ಹೀನ ಮನಸ್ಥಿತಿಯನ್ನು ಪ್ರದರ್ಶಿಸುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ತಮಿಳುನಾಡಿನಲ್ಲಿ ದೇವಾಲಯವೊಂದಕ್ಕೆ ದಲಿತರು ಪ್ರವೇಶಿಸಲು ನಿರಾಕರಿಸಲಾಗಿದೆ. ಇದರಿಂದಾಗಿ ದಲಿತರು ಪ್ರತಿಭಟನೆ ನಡೆಸಿದ್ದು, ಕೊನೆಗೆ ದೇವಾಲಯಕ್ಕೆ ಬೀಗ ಜಡಿಯಲಾಗಿದೆ.
ಕೆಲ ದಿನಗಳ ಹಿಂದೆ ವೀರಣಂಪಟ್ಟಿಯಲ್ಲಿರುವ ಕಾಳಿಯಮ್ಮನ್ ದೇವಾಲಯವನ್ನು ಪ್ರವೇಶಿಸಲು ಪರಿಶಿಷ್ಟ ಪಂಗಡ ಸಮುದಾಯದವರಿಗೆ ನಿರಾಕರಿಸಲಾಗಿದೆ. ವೈಕಾಸಿ ಹಬ್ಬದ ಹಿನ್ನೆಲೆಯಲ್ಲಿ ದಲಿತ ಸಮುದಾಯದವರು ದೇವರ ದರ್ಶನ ಪಡೆಯಲು ಹೋದಾಗ ಜಾತಿ ಹೆಸರಿನಲ್ಲಿ ಭೇದ-ಭಾವ ಮಾಡಲಾಗಿದೆ. ಇದರಿಂದ ಕೆರಳಿದ ದಲಿತರು ದೇವಾಲಯದ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ದಲಿತ ಸಮುದಾಯದ ಸುಮಾರು 80 ಕುಟುಂಬಗಳು ಪ್ರತಿಭಟನೆ ನಡೆಸಿವೆ. ಜಾತಿಯ ಹೆಸರಿನಲ್ಲಿ ಭೇದ-ಭಾವ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ವೈಕಾಸಿ ಹಬ್ಬದ ಹಿನ್ನೆಲೆಯಲ್ಲಿ ನಮಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡಬೇಕು. ಇನ್ನು ಮುಂದೆ ಜಾತಿಯ ಹೆಸರಿನಲ್ಲಿ ಭೇದ-ಭಾವ ಮಾಡುವಂತಾಗಬಾರದು ಎಂದು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ದಲಿತ ಸಮುದಾಯದವರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಡವುರ್ ತಹಸೀಲ್ದಾರ್ ಮುನಿರಾಜ್ ನೇತೃತ್ವದಲ್ಲಿ ನೇತೃತ್ವದಲ್ಲಿ ದೇವಾಲಯ ಆಡಳಿತ ಮಂಡಳಿ ಹಾಗೂ ದಲಿತ ಸಮುದಾಯದವರ ಸಭೆ ನಡೆದಿದೆ. ಆದರೆ, ಸಭೆಯಲ್ಲಿ ಆಡಳಿತ ಮಂಡಳಿ ಹಾಗೂ ದಲಿತರ ಮಧ್ಯೆ ಸಹಮತ ಮೂಡದ ಕಾರಣ ದೇವಾಲಯಕ್ಕೆ ತಾತ್ಕಾಲಿಕವಾಗಿ ಬೀಗ ಜಡಿಯಲಾಗಿದೆ. ರಾಜಿ ಆಗಲು ಎರಡೂ ಕಡೆಯವರು ಒಪ್ಪದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: Chitradurga News: ಹೊಳಲ್ಕೆರೆ ಬಿಜೆಪಿ ಶಾಸಕನಿಗೆ ದಲಿತ ಮುಖಂಡರ ಮುತ್ತಿಗೆ, ಹಲ್ಲೆಗೆ ಯತ್ನ
ಕಾಳಿಯಮ್ಮನ್ ದೇವಾಲಯವು ತಮಿಳುನಾಡಿನ ಪ್ರಮುಖ ದೇವಾಲಯವಾಗಿದೆ. ದೇವಿ ಕಾಳಿಯನ್ನು ಸುತ್ತಮುತ್ತಲಿನ ಜನ ಆರಾಧಿಸುತ್ತಾರೆ. ತಮಿಳುನಾಡಿನ ಹಲವು ಜಿಲ್ಲೆಗಳ ಭಕ್ತರ ಜತೆಗೆ ಪುದುಚೇರಿಯಿಂದಲೂ ಭಕ್ತರು ಆಗಮಿಸಿ ವೈಕಾಸಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಹಾಗಾಗಿ, ಬೇರೆ ಬೇರೆ ಜಿಲ್ಲೆಗಳು ಹಾಗೂ ಹೊರ ರಾಜ್ಯದ ಜನರು ಆಗಮಿಸುವ ಕಾರಣ ದೇವಾಲಯವು ಹೆಚ್ಚು ಪ್ರಸಿದ್ಧಿ ಪಡೆದಿದೆ.