ಶೋಪಿಯಾನ್: ಕಳೆದ ಮೂರು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಕಾಶ್ಮೀರಿ ಪಂಡಿತ ಪೋರಣ್ ಕ್ರಿಶನ್ ಭಟ್ ಎಂಬುವರನ್ನು ಉಗ್ರರು ಹತ್ಯೆ ಮಾಡಿದ್ದರು. ಅದರ ಬೆನ್ನಲ್ಲೇ ಇನ್ನಿಬ್ಬರು ನಾಗರಿಕರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಉತ್ತರಪ್ರದೇಶದ ಕನೌಜ್ ಮೂಲದ ಇಬ್ಬರು ಕಾರ್ಮಿಕರನ್ನು ಅದೇ ಶೋಪಿಯಾನ್ ಜಿಲ್ಲೆಯ ಹರ್ಮೇನ್ ಹಳ್ಳಿಯಲ್ಲಿ ಉಗ್ರರು ಕೊಂದಿದ್ದಾರೆ.
ಈ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದು ‘ಶೋಪಿಯಾನ್ನ ಹರ್ಮೇನ್ನಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಇದರಲ್ಲಿ ಮೋನಿಶ್ ಕುಮಾರ್ ಮತ್ತು ರಾಮ್ ಸಾಗರ್ ಎಂಬ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಇವರಿಬ್ಬರೂ ಉತ್ತರ ಪ್ರದೇಶದ ಕನೌಜ್ ನಿವಾಸಿಗಳು ಎಂಬುದು ಗೊತ್ತಾಗಿದೆ. ಇಬ್ಬರೂ ರಾತ್ರಿ ಮಲಗಿ ನಿದ್ರೆ ಮಾಡುತ್ತಿದ್ದಾಗ ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಈ ಇಬ್ಬರು ಕಾರ್ಮಿಕರ ಹತ್ಯೆ ಬೆನ್ನಲ್ಲೇ ದಾಳಿ ನಡೆಸಿದ ಉಗ್ರರಲ್ಲಿ ಒಬ್ಬನನ್ನು ಶೋಪಿಯಾನ್ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಇಮ್ರಾನ್ ಬಶೀರ್ ಗಾನಿ ಎಂದು ಗುರುತಿಸಲಾಗಿದ್ದು, ಲಷ್ಕರೆ ತೊಯ್ಬಾ ಸಂಘಟನೆಗೆ ಸೇರಿದಾತ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೇ, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಉಗ್ರರ ದಾಳಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತ ಬಲಿ; ಮನೆ ಬಾಗಿಲಿಗೇ ಬಂದು ಗುಂಡಿಟ್ಟ ಭಯೋತ್ಪಾದಕರು