Site icon Vistara News

Terror attack | ಉಗ್ರರ ದಾಳಿಯಿಂದಾಗಿ ಅನಾಥರಾದ ತಾಯಿ; ಮಕ್ಕಳನ್ನು ವಾಪಸು ತಂದುಕೊಡಿ ಎಂದು ಕಣ್ಣೀರು

ಶ್ರೀನಗರ: ಅವರು ಸರೋಜಾ ಬಾಲಾ(58). ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡಾಂಗ್ರಿ ಗ್ರಾಮದಲ್ಲಿರುವ ಅವರ ಪತಿ ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಇಬ್ಬರು ಗಂಡು ಮಕ್ಕಳಿದ್ದ ಸರೋಜಾ ಅವರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಜ.1ರಂದು ಅವರ ಬದುಕೇ ಛಿದ್ರವಾಗಿದೆ. ಇದ್ದಕ್ಕಿದ್ದಂತೆ ಮನೆ ಬಾಗಿಲಿಗೆ ಬಂದ ಉಗ್ರರು(Terror attack) ಸರೋಜಾರ ಇಬ್ಬರೂ ಗಂಡು ಮಕ್ಕಳನ್ನು ಗುಂಡಿಟ್ಟು ಕೊಂದಿದ್ದಾರೆ.

ಇದನ್ನೂ ಓದಿ: Rajouri Terror Attack | ರಾಜೌರಿಯಲ್ಲಿ ದಾಳಿ ನಡೆಸಿದ್ದ ಇಬ್ಬರು ಉಗ್ರರ ಹತ್ಯೆ; ಮೃತ ನಾಗರಿಕರ ಸಂಖ್ಯೆ 7ಕ್ಕೆ ಏರಿಕೆ

ಸರೋಜಾ ಹೊಸ ವರ್ಷದ ದಿನದಂದು ಕಿರಿ ಮಗ ರಾಜ ಕುಮಾರ ಹಾಗೂ ಸೋದರಳಿಯನಿಗೆ ಮನೆಯೊಳಗೆ ಊಟ ಕೊಟ್ಟಿದ್ದರಂತೆ. ಹಿರಿ ಮಗ ಪ್ರದೀಪ್‌ ಆ ಸಮಯದಲ್ಲಿ ಮನೆಯ ಹೊರಗಿದ್ದರು. ಮಕ್ಕಳ ಊಟವಾದ ನಂತರ ಸರೋಜಾ ಪಾತ್ರೆ ತೊಳೆಯಲು ತೆರಳಿದ್ದಾರೆ. ಆಗ ಮನೆಯ ಹೊರಗೆ ಜೋರಾದ ಸದ್ದು ಕೇಳಿದ್ದು, ಪ್ರದೀಪ್‌ ಚೀರುವ ಸದ್ದೂ ಕೇಳಿದೆ. ಏನಾಯಿತು ನೋಡಿ ಎಂದು ಸರೋಜಾ ತನ್ನ ಎರಡನೇ ಮಗನನ್ನು ಮನೆಯಿಂದ ಹೊರಗೆ ಕಳಿಸಿದ್ದಾಳೆ. ಆಗ ಅಲ್ಲಿದ್ದ ಉಗ್ರ ಎರಡನೇ ಮಗನಿಗೂ ಗುಂಡು ಹಾರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಕಾಲಿನಿಂದ ಒದ್ದು ಬೇರೆಡೆ ತೆರಳಿದ್ದಾನೆ. ಈ ದೃಶ್ಯವನ್ನೆಲ್ಲ ಕಣ್ಣಾರೆ ಕಂಡ ತಾಯಿ ಸರೋಜಾ ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಗೆ ತೆರಳುವುದರೊಳಗೆ ಪ್ರದೀಪ್‌ ಪ್ರಾಣ ಬಿಟ್ಟಿದ್ದಾನೆ. ಎರಡನೇ ಮಗನಿಗೆ ರಾಜೌರಿಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರ ಆತನ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದು, ಜಮ್ಮುವಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಿಕೊಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: Terror Attack | ನಿನ್ನೆಯಷ್ಟೇ ಉಗ್ರದಾಳಿಯಾಗಿದ್ದ ರಾಜೌರಿಯಲ್ಲಿ ಇಂದು ಮತ್ತೆ ಐಇಡಿ ಸ್ಫೋಟ; ಮಗು ಸಾವು

ಈ ವಿಚಾರದಲ್ಲಿ ಸರೋಜಾ ಸರ್ಕಾರದ ವಿರುದ್ಧ ಹಾಗೂ ವೈದ್ಯಕೀಯ ಇಲಾಖೆ ವಿರುದ್ಧ ಕಿಡಿ ಕಾರಿದ್ದಾರೆ. ನನ್ನ ಮಗನ ದೇಹದಲ್ಲಿ ಗುಂಡು ಇದ್ದರೂ ವೈದ್ಯರು ಅದನ್ನು ಗಮನಿಸದೆ ಹಾಗೆಯೇ ಬಿಟ್ಟಿದ್ದರು. ಅದರಿಂದಾಗಿ ನನ್ನ ಮಗ ಪ್ರಾಣ ಕಳೆದುಕೊಂಡಿದ್ದಾನೆ. ಸರ್ಕಾರ ನನ್ನ ಮಗನನ್ನು ದೆಹಲಿಗೆ ಏರ್‌ಲಿಫ್ಟ್‌ ಮಾಡಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಏಕೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಸರ್ಕಾರ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಲೇ ಮಗನ ಪ್ರಾಣ ಹೋಗಿದ್ದು, ಅದಕ್ಕೆ ನ್ಯಾಯ ಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.

“ಸರ್ಕಾರ ಈಗ ನನಗೆ ಪರಿಹಾರ ಕೊಡಲು ಬರುತ್ತದೆ. ಒಂದಿಷ್ಟು ಹಣ, ಸರ್ಕಾರಿ ಕೆಲಸ ಕೊಡಲು ಮುಂದಾಗುತ್ತದೆ. ಆದರೆ 10-20 ಲಕ್ಷ ರೂ. ಮತ್ತು ಸರ್ಕಾರಿ ಕೆಲಸಕ್ಕಾಗಿ ನಾನು ನನ್ನ ಮಕ್ಕಳನ್ನೇ ಬಲಿಕೊಡಬೇಕೇ? ಈಗ ನನಗ್ಯಾರು ದಿಕ್ಕಿದ್ದಾರೆ? ಪರಿಹಾರವನ್ನಿಟ್ಟುಕೊಂಡು ನಾನೇನು ಮಾಡಲಿ? ನನಗೆ ನನ್ನ ಮಕ್ಕಳ ಸಾವಿಗೆ ನ್ಯಾಯ ಬೇಕು. ದ್ವೇಷ ತೀರಿಸಿಕೊಳ್ಳಬೇಕು” ಎಂದು ಸರೋಜಾ ಕಣ್ಣೀರಿಡುತ್ತಾ ಹೇಳುತ್ತಿದ್ದಾರೆ. ಸರೋಜಾ ಅವರ ಮೊದಲ ಮಗ ಪ್ರದೀಪ್‌ಗೆ ಇತ್ತೀಚೆಗೆ ಸೇನೆಯ ಶಸ್ತ್ರಾಸ್ತ್ರ ವಿಭಾಗದಲ್ಲಿ ನೇಮಕಾತಿಯಾಗಿತ್ತು. ಮುಂದಿನ ವಾರದಲ್ಲಿ ಅವರು ಕೆಲಸಕ್ಕೆ ಸೇರಿಕೊಳ್ಳುವವರಿದ್ದರು.

Exit mobile version