ಶ್ರೀನಗರ: ಜಮ್ಮು-ಕಾಶ್ಮೀರ(Jammu Kashmir)ದಲ್ಲಿ ಮತ್ತೆ ಉಗ್ರರ ಉಪಟಳ(Terror Attack) ಹೆಚ್ಚಾಗಿದೆ. ರಜೌರಿಯಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದು, ಗುಂಡಿನ ಚಕಮಕಿ ಮುಂದುವರೆದಿದೆ. ಉಗ್ರರನ್ನು ಮಟ್ಟ ಹಾಕಲು ಬಹುದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
ಘಟನೆ ಬಗ್ಗೆ ರಕ್ಷಣಾ ಇಲಾಖೆ ವಕ್ತಾರ ಲೆ.ಕರ್ನಲ್ ಸುನೀಲ್ ಬರ್ಟ್ವಾಲ್ ಪ್ರತಿಕ್ರಿಯಿಸಿದ್ದು, ದೂರದ ರಜೌರಿ ಗ್ರಾಮದಲ್ಲಿ ಸೇನಾ ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಲಾಗಿದೆ. ಉಗ್ರರಿಗೆ ಪ್ರತಿದಾಳಿ ಮೂಲಕ ಸೇನೆ ತಕ್ಕ ಉತ್ತರ ನೀಡಿದೆ. ರಜೌರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಗ್ರರು ಅಡಗಿರುವುದು ಖಚಿತವಾಗಿದ್ದು, ಸೇನೆ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಭಾರೀ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
Major terror attack on Army picket in remote village of Rajouri thwarted. Firing underway. More details awaited: PRO Defence Jammu pic.twitter.com/dOjh25MQZU
— ANI (@ANI) July 22, 2024
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶನಿವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಅರೆಸೇನಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಜಂಟಿ ಭದ್ರತಾ ಪರಿಶೀಲನಾ ಸಭೆಯಲ್ಲಿ ಚಾಲ್ತಿಯಲ್ಲಿರುವ ಭದ್ರತಾ ಸನ್ನಿವೇಶವನ್ನು ಪರಿಶೀಲಿಸಿದ್ದರು. ಇದಾದ ಎರಡು ದಿನಗಳಲ್ಲಿ ಈ ದಾಳಿ ನಡೆದಿದೆ.
ಗುರುವಾರ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದರು. ಜದ್ದನ್ ಬಾಟಾ ಗ್ರಾಮದಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಭಯೋತ್ಪಾದಕರು ಸರ್ಕಾರಿ ಶಾಲೆಯ ತಾತ್ಕಾಲಿಕ ಶಿಬಿರದ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಒಬ್ಬ ಸೈನಿಕನನ್ನು ಹೆಲಿಕಾಪ್ಟರ್ ಮೂಲಕ ಉಧಮ್‌ಪುರ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಪ್ರತ್ಯೇಕ ಘಟನೆಯಲ್ಲಿ, ರಜೌರಿ ಜಿಲ್ಲೆಯ ಸುಂದರ್‌ಬಾನಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿಯ ಮುಂಚೂಣಿಯ ಪೋಸ್ಟ್‌ನಲ್ಲಿ ಬುಧವಾರ ತಡರಾತ್ರಿ ಅನುಮಾನಾಸ್ಪದ ಚಲನವಲನವನ್ನು ಗುರುತಿಸಿದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದರು. ಗುರುವಾರ ಬೆಳಗ್ಗೆ ಶೋಧ ನಡೆಸಿದಾಗ ಅನುಮಾನಾಸ್ಪದ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ದಾಳಿಗೆ ಈ ವರ್ಷ 27 ಜನ ಬಲಿ
ಈ ವರ್ಷದ ಆರಂಭದಿಂದ, ಜಮ್ಮುವಿನ ಆರು ಜಿಲ್ಲೆಗಳಲ್ಲಿ ಸುಮಾರು ಹನ್ನೆರಡು ಭಯೋತ್ಪಾದಕ ದಾಳಿಗಳಲ್ಲಿ 11 ಭದ್ರತಾ ಸಿಬ್ಬಂದಿ, ಗ್ರಾಮ ರಕ್ಷಣಾ ಸಿಬ್ಬಂದಿ ಮತ್ತು ಐದು ಭಯೋತ್ಪಾದಕರು ಸೇರಿದಂತೆ 27 ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ದೋಡಾ ಜಿಲ್ಲೆಯಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಅಧಿಕಾರಿ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: Vande Mataram: ಸಂಸತ್ತಿನಲ್ಲಿ ವಂದೇ ಮಾತರಂ, ಥ್ಯಾಂಕ್ಸ್ ಎಂದು ಹೇಳುವಂತಿಲ್ಲ; ಏಕಿಂಥ ಆದೇಶ?