ಮುಂಬಯಿ ಮಹಾನಗರದಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಬೆದರಿಕೆ ಮೇಲ್ ಸಂದೇಶ ಬಂದಿದೆ. ಇ-ಮೇಲ್ ಕಳಿಸಿದಾತ ತನ್ನ ಹೆಸರು ಹೇಳಿಕೊಂಡಿಲ್ಲ, ಆದರೆ ತಾನು ತಾಲಿಬಾನ್ ಉಗ್ರ ಎಂದು ಹೇಳಿಕೊಂಡಿದ್ದಾನೆ. ತಮಗೆ ಬಂದ ಇ-ಮೇಲ್ ಸಂದೇಶವನ್ನು ರಾಷ್ಟ್ರೀಯ ತನಿಖಾ ದಳ ಪೊಲೀಸರ ಗಮನಕ್ಕೆ ತಂದಿದೆ. ಅದರ ಬೆನ್ನಲ್ಲೇ ಮುಂಬಯಿ ಸೇರಿ, ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಷ್ಟೇ ಅಲ್ಲ, ಬೆಂಗಳೂರು ಸೇರಿ ದೇಶದ ಎಲ್ಲ ಮಹಾನಗರಗಳಲ್ಲೂ ಪೊಲೀಸ್ ಕಣ್ಗಾವಲು ಇಡಲಾಗಿದೆ.
ಬೆದರಿಕೆ ಸಂದೇಶ ಕಳಿಸಿದವ ಹೆಚ್ಚೇನೂ ಹೇಳಿಕೊಂಡಿಲ್ಲ. ತಾನೊಬ್ಬ ತಾಲಿಬಾನಿ ಸದಸ್ಯ ಎಂದು ಉಲ್ಲೇಖಿಸಿದ್ದು, ಅಫ್ಘಾನಿಸ್ತಾನ ನಾಯಕ, ಸದ್ಯದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಆದೇಶದ ಮೇರೆಗೆ ಮುಂಬಯಿಯಲ್ಲಿ ದಾಳಿ ನಡೆಸಲು ಯೋಜಿಸಿದ್ದಾಗಿ ಹೇಳಿಕೊಂಡಿದ್ದಾನೆ. ಹೀಗೆ ಬೆದರಿಕೆ ಸಂದೇಶ ಕಳಿಸಿದವನ ಮೂಲ ಪತ್ತೆಗಾಗಿ ಮುಂಬಯಿ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳು ಜಂಟಿಯಾಗಿ ತನಿಖೆ ಪ್ರಾರಂಭ ಮಾಡಿವೆ.
ಮುಂಬಯಿ ಪೊಲೀಸರಿಗೆ 2022ರ ಅಕ್ಟೋಬರ್ನಲ್ಲಿ ಇಂಥದ್ದೇ ಒಂದು ಬೆದರಿಕೆ ಕರೆ ಬಂದಿತ್ತು. ಮುಂಬಯಿ ನಗರದ ಇನ್ಫಿನಿಟಿ ಮಾಲ್ ಅಂಧೇರಿ, ಪಿವಿಆರ್ ಮಾಲ್ ಜುಹು ಮತ್ತು ಸಹಾರಾ ಹೋಟೆಲ್ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಅಪರಿಚಿತರು ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದರು. ಆದರೆ ನಂತರ ಎಲ್ಲಿಯೂ ಬಾಂಬ್ ಪತ್ತೆಯಾಗಿರಲಿಲ್ಲ. ಈಗ ತಾಲಿಬಾನ್ ಉಗ್ರ ತಾನು ಎಂದು ಹೇಳಿಕೊಂಡವನೊಬ್ಬ ದಾಳಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: NIA Chargesheet | ಅಲ್ ಕಾಯಿದಾ ಜತೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್