ಶ್ರೀನಗರ: ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲೂ ಮಿನಿ ಬಸ್ ಒಂದರಲ್ಲಿ ಪ್ರೆಶರ್ ಕುಕ್ಕರ್ ಬಾಂಬ್ (Cooker Bomb In Kashmir) ಪತ್ತೆಯಾಗಿದೆ. ಅದೃಷ್ಟವಶಾತ್, ಪ್ರೆಶರ್ ಕುಕ್ಕರ್‌ನಲ್ಲಿದ್ದ ಸ್ಫೋಟಕವನ್ನು ಪೊಲೀಸರು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದು, ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಇಮಾಮ್‌ಸಾಹಿಬ್‌ನಲ್ಲಿ ಶೋಪಿಯಾನ್ ಪೊಲೀಸರು ಹಾಗೂ 44 ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿಯು ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (IED) ಪತ್ತೆಹಚ್ಚಿದ್ದಾರೆ. “ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯು ಕೂಡಲೇ ಸ್ಥಳಕ್ಕೆ ಆಗಮಿಸಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಗಿದೆ. ಐಇಡಿ ಪತ್ತೆಯಾದ ಸ್ಥಳದ ಸುತ್ತ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಿನಿ ಬಸ್‌ನಲ್ಲಿ ಸ್ಫೋಟಕ ಸಾಧನ ಇರುವ ಕುರಿತು ಮಾಹಿತಿ ಆಧರಿಸಿ ಶೋಪಿಯಾನ್ ಪೊಲೀಸರು ಹಾಗೂ 44 ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿಯು ಜಂಟಿ ಕಾರ್ಯಾಚರಣೆ ನಡೆಸಿದೆ. ಮಿನಿ ಬಸ್‌ಅನ್ನು ಪರಿಶೀಲಿಸಿದಾಗ ಐಇಡಿ ಪತ್ತೆಯಾಗಿದೆ. ಇದೇ ತಿಂಗಳ ಆರಂಭದಲ್ಲಿ ನಶ್ರಿ ನಾಕಾದಲ್ಲಿ ಮಿನಿಬಸ್‌ನಲ್ಲಿ ಐಇಡಿ ಪತ್ತೆಯಾಗಿತ್ತು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ಕುಕ್ಕರ್ ಬಾಂಬ್ ಹಿಡಿದು ಫೋಟೊ ತೆಗೆಸಿಕೊಂಡಿದ್ದೇಕೆ? ಅವನ ಟಾರ್ಗೆಟ್ ಐಸಿಸ್!