Site icon Vistara News

Terrorist Attack: ಕುಪ್ವಾರ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮ: ಪಾಕ್‌ ಉಗ್ರನನ್ನು ಹೊಡೆದುರುಳಿಸಿದ ಸೇನೆ

Terrorist Attack

ನವದೆಹಲಿ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕುಪ್ವಾರ (Kupwara) ಜಿಲ್ಲೆಯಲ್ಲಿ ಜುಲೈ 27ರಂದು ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಸೈನಿಕರ ಪೈಕಿ ಓರ್ವ ಮೃತಪಟ್ಟಿದ್ದಾರೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆ (Line of Control)ಯ ಉದ್ದಕ್ಕೂ ನಡೆದ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನ್ನು ಹೊಡೆದುರುಳಿಸಲಾಗಿದೆ.

ʼʼಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್‌ ಟೀಮ್‌ (Border Action Team)ನ ಉಗ್ರನೊಬ್ಬ ಸಾವನ್ನಪ್ಪಿದ್ದಾನೆʼʼ ಎಂದು ಸೇನೆ ದೃಢಪಡಿಸಿದೆ. 2021ರ ಫೆಬ್ರವರಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಮುಂಚಿತವಾಗಿ ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್‌ ಟೀಮ್ ಅನೇಕ ದಾಳಿಗಳಲ್ಲಿ ಭಾಗಿಯಾಗಿತ್ತು. ಇದನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು.

“ಇತ್ತೀಚಿನ ದಿನಗಳಲ್ಲಿ ಎಲ್ಒಸಿ ಉದ್ದಕ್ಕೂ ಉಗ್ರರ ಚಟುವಟಿಕೆ ಹೆಚ್ಚಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸೇನೆ, “ನಿಯಂತ್ರಣ ರೇಖೆಯ ಮಚ್ಚಲ್ ಸೆಕ್ಟರ್‌ನ ಕಮ್ಕಾರಿಯಲ್ಲಿರುವ ಫಾರ್ವರ್ಡ್ ಪೋಸ್ಟ್‌ನಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಒಬ್ಬ ಪಾಕಿಸ್ತಾನಿ ಉಗ್ರ ಸಾವನ್ನಪ್ಪಿದ್ದು, ನಮ್ಮ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆʼʼ ಎಂದು ತಿಳಿಸಿದೆ. ಕಳೆದ ಒಂದು ತಿಂಗಳಲ್ಲಿ ಕುಪ್ವಾರದಲ್ಲಿ ನಡೆದ ನಾಲ್ಕನೇ ಎನ್‌ಕೌಂಟರ್ ಇದಾಗಿದೆ.

ಕೆಲವು ದಿನಗಳ ಹಿಂದೆ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿ ಉಗ್ರ ಒಳನುಸುಳುವಿಕೆ ಮತ್ತು ಭಯೋತ್ಪಾದಕ ದಾಳಿಗಳನ್ನು ಎದುರಿಸಲು ನಡೆಸುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದರು.

ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್‌ ಯುದ್ಧಭೂಮಿಗೆ ಅಂದೇ ಕಾಲಿಟ್ಟಿದ್ರು ಮೋದಿ- ಹಳೆಯ ಫೊಟೋ ವೈರಲ್‌

ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಮೋದಿ

ಈ ಮಧ್ಯೆ ಭಯೋತ್ಪಾದನೆಯನ್ನು ನಿಗ್ರಹಿಸುವ ಬದಲು ಉಗ್ರರಿಗೆ ಆಶ್ರಯ ನೀಡದ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್‌ ವಿಜಯ ದಿವಸವಾದ ಜುಲೈ 26ರಂದು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ನೆರೆ ರಾಷ್ಟ್ರವು ಥಂಡಾ ಹೊಡೆದಿದೆ. ನರೇಂದ್ರ ಮೋದಿ ಎಚ್ಚರಿಕೆ ನೀಡಿದ ಬಳಿಕ ಪಾಕಿಸ್ತಾನ ಸೇನೆಯು ಗಲಿಬಿಲಿಗೊಂಡಿದ್ದು, ಗಡಿಯಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿದೆ. ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನವು ಗಡಿಯಲ್ಲಿ ಎರಡು ಹೆಚ್ಚುವರಿ ಬ್ರಿಗೇಡ್‌ಗಳು, 3 ಪಿಒಕೆ ಬ್ರಿಗೇಡ್‌ ಹಾಗೂ 2 ಹೆಚ್ಚುವರಿ ಪಿಒಕೆ ಬ್ರಿಗೇಡ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಾಕಿಸ್ತಾನ ಸೈನಿಕರು ಭಾರತದೊಳಗೆ ಉಗ್ರರನ್ನು ನುಸುಳಿಸಲು ಮಾರ್ಗದರ್ಶನ, ನೆರವು ನೀಡುತ್ತಿದೆ ಎಂಬ ಚಿತ್ರಗಳು ಲಭ್ಯವಾದ ಬೆನ್ನಲ್ಲೇ ಮೋದಿ ಎಚ್ಚರಿಕೆ ನೀಡಿದ್ದರು. ಇದಾದ ಕೆಲ ಹೊತ್ತಿನಲ್ಲೇ ಪಾಕಿಸ್ತಾನ ಸೈನಿಕರು ಗಡಿಯಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾರ್ಗಿಲ್‌ ವಿಜಯ ದಿವಸಕ್ಕೆ ಜುಲೈ 26ಕ್ಕೆ 25 ವರ್ಷ ಸಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಕಳೆದ ಯುದ್ಧಗಳಲ್ಲಿ ಸೋಲುಂಡಿದ್ದರೂ ಬುದ್ದಿ ಬಾರದ ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದುವರೆಗೆ ಪಾಕಿಸ್ತಾನ ತನ್ನ ತಪ್ಪಿನ ಪಾಠ ಕಲಿತಿಲ್ಲ ಎಂದು ಗುಡುಗಿದ್ದರು.

Exit mobile version