ಮಧ್ಯಪ್ರದೇಶ: ಜಮ್ಮು-ಕಾಶ್ಮೀರ(Jammu and Kashmir)ದ ಪೂಂಚ್‌ನಲ್ಲಿ ನಡೆದ ಉಗ್ರರ ದಾಳಿ(Terrorist attack)ಯಲ್ಲಿ ಹುತಾತ್ಮರಾದ ಭಾರತೀಯ ವಾಯುಪಡೆ(IAF)ಯ ಅಧಿಕಾರಿ ವಿಕ್ಕಿ ಪಹಾದೆ(Vikky Pahade) ಮುಂದಿನ ತಿಂಗಳು ತಮ್ಮ ಐದು ವರ್ಷದ ಮಗನ ಹುಟ್ಟುಹಬ್ಬ ಆಚರಣೆಗೆ ಸಕಲ ಸಿದ್ದತೆ ಮಾಡಿದ್ದರಂತೆ. ಮಧ್ಯಪ್ರದೇಶದ ಚಿಂದ್‌ವಾರ ಜಿಲ್ಲೆಯ ಪಹಾದೆ ಉದಾಮ್‌ಪುರದ ಕಮಾಂಡೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇವರ ಜೊತೆ ನಾಲ್ವರು IAF ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.
ಮಗನ ಹುಟ್ಟುಹಬ್ಬಕ್ಕೆಂದು ಜೂ.7ರಂದು ವಾಪಾಸಾಗುತ್ತಾರೆಂದು ಆಸೆಯಿಂದ ಕಾಯುತ್ತಿದ್ದ ಪಹಾದೆ ಅವರ ಸಾವು ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಈ ಕುರಿತು ಅವರು ಸೋದರ ಸಂಬಂಧಿ ಪ್ರತಿಕ್ರಿಯಿಸಿದ್ದು, ಇಡೀ ಕುಟುಂಬ ಪದಾದೆ ಅವರ ಬರುವಿಕೆಗೆ ಕಾಯುತ್ತಿತ್ತು. ಆದರೆ ಅವರು ಹುತಾತ್ಮರಾಗಿರುವ ಸುದ್ದಿ ಕೇಳಿ ಇಡೀ ಕುಟುಂಬ ಆಘಾತದಲ್ಲಿದೆ. ಇಂದು ಪದಾದೆ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ತರಲಾಗುತ್ತಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಪಹಾದೆ ಅವರು 2011ರಲ್ಲಿ ತಂದೆ ಆಸೆಯಂತೆ ವಾಯುಸೇನೆಗೆ ಸೇರಿದ್ದರು. ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಪಹಾದೆ ಸಹೋದರನ ಸಹಾಯದಿಂದ ವಿದ್ಯಾಭ್ಯಾಸ ಮುಗಿಸಿ ಕಷ್ಟಪಟ್ಟು ವಾಯುಸೇಗೆ ನೇಮಕಗೊಂಡಿದ್ದ. ನಾವು ಕೆಲವು ವರ್ಷಗಳಿಂದ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ಇದೀಗ ಪಹಾದೆ ವಿಧಿವಶರಾಗಿರುವುದು ಇಡೀ ಕುಟುಂಬಕ್ಕೆ ಬಹುದೊಡ್ಡ ಶಾಕ್. ಈ ಸಂದರ್ಭದಲ್ಲಿ ಸರ್ಕಾರದ ಬೆಂಬಲ ನಮಗೆ ಅತ್ಯಗತ್ಯ. ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ನಮ್ಮ ಸಹೋದರನ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಸಹಾಯ ಸಿಗಲೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಘಟನೆ ಬಗ್ಗೆ IAF ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಪೂಂಚ್ ಸೆಕ್ಟರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ನಮ್ಮ ವೀರ ಯೋಧ ವಿಕ್ಕಿ ಪಹಾದೆ ಹುತಾತ್ಮರಾಗಿದ್ದಾರೆ. ಅವರ ಶೌರ್ಯ, ಪರಾಕ್ರಮ ಮತ್ತು ಬಲಿದಾನಕ್ಕೆ ಸೆಲ್ಯೂಟ್ ಮಾಡುತ್ತೇವೆ. ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ಪಹಾದೆ ಅವರ ಪಾರ್ಥೀವ ಶರೀರವನ್ನು IAF ವಿಮಾನದಲ್ಲಿ ನೆರೆಯ ಮಹಾರಾಷ್ಟ್ರದ ನಾಗ್ಪುರಕ್ಕೆ ಕರೆತರಲಾಗುತ್ತದೆ. ಅಲ್ಲಿಂದ ರಸ್ತೆ ಮೂಲಕ ಚಿಂದ್‌ವಾರಕ್ಕೆ ಕರೆ ತರಲಾಗುತ್ತದೆ. ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಪಹಾದೇ ಸೇರಿದಂತೆ ಐವರು ಐಎಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದರು.