ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ವ್ಯಾಪ್ತಿಯಲ್ಲಿ (Poonch Region) ಸೇನಾ ಟ್ರಕ್ ಮೇಲೆ ಉಗ್ರರು ಶುಕ್ರವಾರ ಸಂಜೆ ದಾಳಿ ನಡೆಸಿದ್ದಾರೆ(Terrorist Attack army). ಪ್ರತಿಯಾಗಿ ಭಾರತೀಯ ಯೋಧರು ಕೂಡ ಗುಂಡಿನ ಚಕಮಕಿ ನಡೆಸಿದ್ದಾರೆ ಎಂದು ವರದಿಯಾಗಿದೆ(Soldiers Fire Back). ಯಾವುದೇ ಸಾವು ನೋವಿನ ಬಗ್ಗೆ ಇನ್ನೂ ತಿಳಿದು ಬಂದಿಲ್ಲ, ಉಗ್ರರ ಜತೆಗಿನ ಗುಂಡಿನ ಚಕಮಕಿ ಮುಂದುವರಿದಿದೆ.
ರಾಜೌರಿಯ ಡೇರಾ ಕಿ ಗಲಿಯಲ್ಲಿ ಹೊಂಚುದಾಳಿಯಿಂದ ನಾಲ್ವರು ಸೈನಿಕರು ಮೃತಪಟ್ಟು ಐವರು ಗಾಯಗೊಂಡ ನಂತರ ಕಳೆದ ಕೆಲವು ವಾರಗಳಲ್ಲಿ ಈ ಪ್ರದೇಶದಲ್ಲಿ ಸೇನೆಯ ಮೇಲೆ ಶುಕ್ರಾರ ಸಂಜೆ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದೆ. ಕಳೆದ ಬಾರಿ ದಾಳಿ ನಡೆದ ಸ್ಥಳದಿಂದ 40 ಕಿ.ಮೀ ದೂರದ ಪೂಂಚ್‌ನ ಖನೇತಾರ್ ಜಿಲ್ಲೆಯಲ್ಲಿ ಈ ಉಗ್ರ ಕೃತ್ಯ ನಡೆದಿದೆ. ಹತ್ತಿರದ ಗುಡ್ಡದಿಂದ ಎರಡು ಸುತ್ತಿನ ಗುಂಡಿನ ದಾಳಿಯನ್ನು ಉಗ್ರರ ನಡೆಸಿದ್ದಾರೆ. ಇದರಲ್ಲಿ ಹಿರಿಯ ಸೇನಾಧಿಕಾರಿಯ ವಾಹನಕ್ಕೆ ಹಾನಿಯಾಗಿದೆ.
ಪಿರ್ ಪಂಜಾಲ್ ಪ್ರದೇಶ – ರಜೌರಿ ಮತ್ತು ಪೂಂಚ್ – 2003ರಿಂದ ಭಯೋತ್ಪಾದನೆಯಿಂದ ಮುಕ್ತವಾಗಿದ್ದವು. ಆದರೆ, 2021ಅಕ್ಟೋಬರ್ ತಿಂಗಳಿಂದ ಉಗ್ರ ದಾಳಿಗಳು ಪುನರಾರಂಭವಾಗಿವೆ. ಕಳೆದ ಏಳು ತಿಂಗಳುಗಳಲ್ಲಿ, ಅಧಿಕಾರಿಗಳು ಮತ್ತು ಕಮಾಂಡೋಗಳು ಸೇರಿದಂತೆ 20 ಸೈನಿಕರು ಉಗ್ರ ದಾಳಿಯಲ್ಲಿ ಹತರಾಗಿದ್ದಾರೆ. ಕಳೆದ 2 ವರ್ಷದಲ್ಲಿ ಉಗ್ರರ ಜತೆಗಿನ ಸೆಣೆಸಾಟದಲ್ಲಿ ಭಾರತದ 35 ಅಧಿಕ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ.
ರಾಜೌರಿ ಮತ್ತು ಪೂಂಚ್ ಪ್ರದೇಶಗಳಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವಲ್ಲಿ ಭಾರತದ ವಿರೋಧಿಗಳು ಅಂದರೆ, ಪಾಕಿಸ್ತಾನವು “ಸಕ್ರಿಯ ಪಾತ್ರ” ವಹಿಸುವುದನ್ನು ಮುಂದುವರೆಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಗುರುವಾರವಷ್ಟೇ ಹೇಳಿದ್ದರು. ಶುಕ್ರವಾರ ಉಗ್ರರು ಸೇನಾಧಿಕಾರಿಯ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಕಳೆದ ಐದಾರು ತಿಂಗಳಲ್ಲಿ, ರಾಜೌರಿ ಮತ್ತು ಪೂಂಚ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಇದು ಕಳವಳಕಾರಿ ವಿಷಯವಾಗಿದೆ. 2003ಕ್ಕಿಂತ ಮುಂಚೆ ಆ ಪ್ರದೇಶದಲ್ಲಿ ಭಯೋತ್ಪಾದನೆಯು ನಿರ್ಮೂಲನೆಯಾಯಾಗಿತ್ತು. 2027ರವರೆಗೂ ಈ ಪ್ರದೇಶದಲ್ಲಿ ಶಾಂತಿ ನಲೆಸಿತ್ತು. 2018ರಿಂದ ಈಚೆಗೆ ಕಣಿವೆಯಲ್ಲಿ ಪರಿಸ್ಥಿತಿ ತಹಬಂದಿಗೆ ಬರುತ್ತಿರುವುದನ್ನು ಸಹಿಸಲಾಗದೇ ನಮ್ಮ ವಿರೋಧಿಗಳು ಭಯೋತ್ಪಾದನೆಗಾಗಿ ಸಕ್ರಿಯ ಪಾತ್ರ ನಿರ್ವಹಿಸುತ್ತಿದ್ದಾರೆಂದು ಅವರು ಆರೋಪಿಸಿದ್ದರು.
ಈ ಸುದ್ದಿಯನ್ನೂ ಓದಿ: ‘ಉಗ್ರರ ಸ್ವರ್ಗ’ ಪಾಕಿಸ್ತಾನದಲ್ಲೇ 306 ಉಗ್ರ ದಾಳಿಗಳು; 693 ಮಂದಿ ಸಾವು!