ಪಂಜಾಬ್ ಗಾಯಕ ಸಿಧು ಮೂಸೇವಾಲಾ ಹತ್ಯೆ, ಮೇ ತಿಂಗಳಲ್ಲಿ ಪಂಜಾಬ್ ಪೊಲೀಸ್ ಗುಪ್ತಚರ ದಳದ ಪ್ರಧಾನ ಕಚೇರಿ ಮೇಲೆ ನಡೆದ ರಾಕೆಟ್ ಚಾಲಿತ ಗ್ರೆನೇಡ್ ದಾಳಿ, 2021ರ ಮೇ ತಿಂಗಳಲ್ಲಿ ನಡೆದ ಲುಧಿಯಾನಾ ಕೋರ್ಟ್ ಬ್ಲಾಸ್ಟ್ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖಲಿಸ್ತಾನಿ ಉಗ್ರಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ದ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂದಾ ಪಾಕಿಸ್ತಾನದಲ್ಲಿ ಹತ್ಯೆಯಾಗಿದ್ದಾಗಿ ವರದಿಯಾಗಿದೆ. ಮೇ ತಿಂಗಳಲ್ಲಿ ಪಂಜಾಬ್ ಪೊಲೀಸ್ ಗುಪ್ತಚರ ದಳದ ಪ್ರಧಾನ ಕಚೇರಿ ಮೇಲಿನ ದಾಳಿಯಲ್ಲಿ ಈತ ಮಾಸ್ಟರ್ಮೈಂಡ್ ಆಗಿದ್ದ. ರಿಂದಾನನ್ನು ಹತ್ಯೆ ಮಾಡಿದ ಹೊಣೆಯನ್ನು ಗ್ಯಾಂಗ್ಸ್ಟರ್ ದೇವಿಂದರ್ ಬಂಬಿಹಾ ಗುಂಪು ಹೊತ್ತುಕೊಂಡಿದೆ. ಹರ್ವಿಂದರ್ ಸಿಂಗ್ನನ್ನು ಗುಂಡು ಹೊಡೆದು ಹತ್ಯೆ ಮಾಡಿದ್ದಾಗಿ ಬಂಬಿಹಾ ಗುಂಪು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.
ಇನ್ನೊಂದು ಮೂಲಗಳ ಪ್ರಕಾರ, ಹರ್ವಿಂದರ್ ಸಿಂಗ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ. ಆತನ ಎರಡೂ ಕಿಡ್ನಿಗಳು ಕಾರ್ಯ ನಿಲ್ಲಿಸಿದ್ದವು. ಲಾಹೋರ್ನ ಆಸ್ಪತ್ರೆಯಲ್ಲಿ 15 ದಿನಗಳಿಂದ ಅಡ್ಮಿಟ್ ಆಗಿದ್ದ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದೂ ಹೇಳಲಾಗಿದೆ. ಇನ್ನು ಹರ್ವಿಂದರ್ ಸಿಂಗ್ ತಲೆಗೆ ಭಾರತೀಯ ತನಿಖಾ ದಳ (ಎನ್‌ಐಎ) 10 ಲಕ್ಷ ರೂಪಾಯಿ ಬಹುಮಾನ ಕಟ್ಟಿತ್ತು.
ಹರ್ವಿಂದರ್ ಸಿಂಗ್ ರಿಂದಾ ಖಲಿಸ್ತಾನಿ ಉಗ್ರನಾಗಿದ್ದು, ದೇಶ-ವಿದೇಶಗಳಲ್ಲಿರುವ ಗ್ಯಾಂಗ್ಸ್ಟರ್ಗಳು ಮತ್ತು ಪಾಕಿಸ್ತಾನಿ ಮೂಲದ ಉಗ್ರಗುಂಪುಗಳ ಮಧ್ಯೆ ಸಂಪರ್ಕ ಸೇತುವೆಯಂತಿದ್ದ. ಗಡಿಭಾಗಗಳಲ್ಲಿ ನಡೆಯುವ ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳ ಅಕ್ರಮ ಸಾಗಣೆಯಲ್ಲೂ ಈತ ಭಾಗಿಯಾಗಿದ್ದ. ಮಹಾರಾಷ್ಟ್ರ, ಚಂಡಿಗಢ, ಹರ್ಯಾಣ ಮತ್ತು ಪಶ್ಚಿಮ ಬಂಗಾಳ ಸೇರಿ ಇನ್ನಿತರ ಪ್ರದೇಶಗಳಲ್ಲಿ ಅನೇಕ ಕ್ರೈಂಗಳಲ್ಲಿ ಭಾಗಿಯಾಗಿದ್ದ ( Harwinder Rinda ) ಇವನನ್ನು ಮೋಸ್ಟ್ ವಾಂಟೆಡ್, ಎ ಪ್ಲಸ್ ವರ್ಗದ ಗ್ಯಾಂಗ್ಸ್ಟರ್ ಎಂದೇ ಪರಿಗಣಿಸಿ, ಹುಡುಕಾಟ ನಡೆದಿತ್ತು.
ಇದನ್ನೂ ಓದಿ: Mangalore Blast | ಸ್ಫೋಟ ತನಿಖೆಗೆ ಆಗಮಿಸಿದ ಎನ್‌ಐಎ ತಂಡ; ಉಗ್ರ ಕೃತ್ಯ ಆಯಾಮದಲ್ಲಿ ಪರಿಶೀಲನೆ