Site icon Vistara News

Terrorist Killed: ಮುಂದುವರಿದ ಉಗ್ರರ ಬೇಟೆ; ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Terrorist Killed

Terrorist Killed

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬೇಟೆ ಮುಂದುವರಿದಿದ್ದು, ಬುಧವಾರ ಓರ್ವ ಭಯೋತ್ಪಾದಕನ್ನು ಹೊಡೆದುರುಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಗಂಡೋಹ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ (Security Forces)ಯ ಸಿಬ್ಬಂದಿ ಒಬ್ಬ ಭಯೋತ್ಪಾದಕನನ್ನು ಕೊಂದಿದ್ದಾರೆ (Terrorist Killed). ಇನ್ನೂ ಇಬ್ಬರು ಭಯೋತ್ಪಾದಕರು ಅಡಗಿ ಕುಳಿತಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ರಾಜ್ಯದಲ್ಲಿ ಇತ್ತೀಚೆಗೆ ಭಯೋತ್ಪಾದಕರ ಹಾವಳಿ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಸೇನೆ ನಿರಂತರವಾಗಿ ಪ್ರಯತ್ನಿಸುತ್ತಿದೆ. “ಇಂದು ನಡೆದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಕೊಲ್ಲಲಾಗಿದೆ. ಎನ್‌ಕೌಂಟರ್‌ ಈಗಲೂ ಮುಂದುವರಿದಿದೆʼʼ ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದರು.

ʼʼಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಪ್ರಾರಂಭಿಸಿದಾಗ ಮೂವರು ಭಯೋತ್ಪಾದಕರು ಇರುವ ಬಗ್ಗೆ ಸುಳಿವು ಲಭಿಸಿತ್ತು. ಈ ವೇಳೆ ಉಗ್ರರೂ ದಾಳಿ ನಡೆಸಿದ್ದರು. ಸೇನಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು. ಕಳೆದ ಒಂದು ವಾರದಲ್ಲಿ ಭಯೋತ್ಪಾದಕರ ಪತ್ತೆಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆʼʼ ಎಂದು ಅವರು ಹೇಳಿದರು. ದೋಡಾ, ರಾಜೌರಿ, ಪೂಂಚ್ ಪ್ರದೇಶಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಸೇನೆ ಭಯೋತ್ಪಾದಕರ ನಿರ್ಮೂಲನೆಗೆ ಪಣ ತೊಟ್ಟಿದೆ.

ಜೂನ್ 11, 12ರಂದು ಚಟ್ಟರ್ಗಲ್ಲಾ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದರು. ಇದಕ್ಕೆ ಸೇನೆ ಪ್ರತಿಕಕಾರ ತೀರಿಸಿಕೊಳ್ಳುತ್ತಿದ್ದು, ಈಗಾಗಲೆ 7-8 ಭಯೋತ್ಪಾದಕರು ಸತ್ತಿದ್ದಾರೆ. ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ ಆರೋಪದ ಮೇಲೆ ಮೂವರು ಸ್ಥಳೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ.

ಇದರ ಜತೆಗೆ ಮಂಗಳವಾರ ಸಂಜೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ರಜೌರಿ ಜಿಲ್ಲೆಯ ಪಿಂಡ್ ಗ್ರಾಮದಿಂದ ಚೀನಾದ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಭದ್ರತಾ ಪಡೆಯ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು ಕಾಶ್ಮೀರದ ಉರಿಯಲ್ಲಿ ಎನ್​ಕೌಂಟರ್​

ಮೂರು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಕನಿಷ್ಠ ಇಬ್ಬರು ಉಗ್ರರನ್ನು ಹೊಡೆದುರುಳಿಸಿದರು. ಈ ಮೂಲಕ ಗಡಿ ನಿಯಂತ್ರಣ ರೇಖೆ (LoC) ಉದ್ದಕ್ಕೂ ಒಳನುಸುಳುವ ಭಯೋತ್ಪಾದಕರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಹತ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನ ಗೊಹಲ್ಲಾನ್ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನಾ ಸಿಬ್ಬಂದಿ ಉಗ್ರರ ಅನುಮಾನಾಸ್ಪದ ಚಲನೆಯನ್ನು ಗಮನಿಸಿ ಈ ಬಗ್ಗೆ ಪ್ರಶ್ನಿಸಿದರು. ಆಗ ಭಯೋತ್ಪಾದಕರು ಗುಂಡು ಹಾರಿಸಿದರು. ಬಳಿಕ ಸೇನಾ ಸಿಬ್ಬಂದು ಪ್ರತಿ ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿದರು. ʼʼಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Exit mobile version