Site icon Vistara News

ಜಿ20 ಪೂರ್ವಭಾವಿ ಸಭೆಗೂ ಮುನ್ನ ಇನ್ನೊಂದು ದಾಳಿ ನಡೆಸಲು ಪಾಕ್​ ಉಗ್ರರ ಪ್ಲ್ಯಾನ್​; ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್​

Terrorists Planning Poonch Type Terror Attack In Jammu Kashmir Amid G 20 Meet

#image_title

ಶ್ರೀನಗರ: 2023ನೇ ಸಾಲಿನ ಜಿ 20 ಶೃಂಗಸಭೆಯ (G20 Meet) ಆತಿಥ್ಯ ವಹಿಸಲಿರುವ ಭಾರತ ಅದರ ಪೂರ್ವಭಾವಿ ಸಭೆಗಳನ್ನು ವಿವಿಧ ಪ್ರಮುಖ ನಗರಗಳಲ್ಲಿ ನಡೆಸುತ್ತಿದೆ. ಹಾಗೇ ಮೇ ತಿಂಗಳ 22-24ರವರೆಗೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜಿ 20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆ ನಡೆಯಲಿದೆ. ಆ ಸಭೆಗೆ ಈಗ ಉಗ್ರ ಬೆದರಿಕೆ ಎದುರಾಗಿದೆ. ಜಿ 20 ಸಭೆಯ ಪೂರ್ವಭಾವಿಯಾಗಿ ನಡೆಯಲಿರುವ ಪ್ರವಾಸೋದ್ಯಮ ಸಭೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಉಗ್ರರು ಶಾಂತಿ ಕದಡಲು ಪ್ಲ್ಯಾನ್ ರೂಪಿಸಿದ್ದಾರೆ. ಇತ್ತೀಚೆಗೆ ಪೂಂಚ್​​ನಲ್ಲಿ ನಡೆಸಿದ ಮಾದರಿಯಲ್ಲೇ ಇನ್ನೊಂದು ದಾಳಿ (Terror Attack) ನಡೆಸಲು ಸಂಚು ಮಾಡಿದ್ದಾರೆ. ತಾವಿದ್ದೇವೆ ಎಂದು ಭಯ ಹುಟ್ಟಿಸುವ ಜತೆಗೆ, ಜಿ20 ಸಭೆಯನ್ನು ನಿಲ್ಲಿಸುವುದು ಅವರ ಪ್ರಮುಖ ಉದ್ದೇಶವಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಜಮ್ಮು-ಕಾಶ್ಮೀರದಾದ್ಯಂತ ಹೈಅಲರ್ಟ್ ಘೋಷಣೆ (High Alert In Jammu Kashmir) ಮಾಡಲಾಗಿದೆ.

ಶ್ರೀನಗರದಲ್ಲಿ ಮೇ ಅಂತ್ಯದ ವೇಳೆಗೆ ಜಿ 20 ಪೂರ್ವಭಾವಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿ, ಕಾಶ್ಮೀರದ ಭದ್ರತಾ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​, ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್​ ಮನೋಜ್ ಸಿನ್ಹಾ, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ, ರಾ ಏಜೆನ್ಸಿ ಮುಖ್ಯಸ್ಥ, ಗುಪ್ತಚರ ದಳದ ನಿರ್ದೇಶಕ ಪಾಲ್ಗೊಂಡಿದ್ದರು.

ಇದನ್ನೂ ಓದಿ: Poonch Terror Attack: ಸೇನಾ ವಾಹನದ ಮೇಲೆ ದಾಳಿ ನಡೆಸಲು ಉಗ್ರರಿಗೆ ಸ್ಥಳೀಯರಿಂದಲೇ ಸಿಕ್ಕಿತ್ತು ನೆರವು

ಪೂಂಚ್​ ಉಗ್ರ ದಾಳಿ

ಜಮ್ಮು-ಕಾಶ್ಮೀರದ ಪೂಂಚ್​​ನಲ್ಲಿ ಬಿಂಬರ್​ ಗಲಿ ರಸ್ತೆಯಲ್ಲಿ ಇತ್ತೀಚೆಗೆ ಭಯಾನಕ ಉಗ್ರದಾಳಿಯಾಗಿತ್ತು. ಸೇನಾ ವಾಹನದ ಮೇಲೆ ಪಾಕಿಸ್ತಾನದ ಉಗ್ರರು ಗ್ರೆನೇಡ್ ಚಾಲಿತ ರಾಕೆಟ್​ ದಾಳಿ ಮಾಡಿದ್ದರು. ಇಡೀ ಸೇನಾ ವಾಹನ ಹೊತ್ತಿ ಉರಿದಿತ್ತು. ಐವರು ಯೋಧರು ಮೃತಪಟ್ಟು, ಒಬ್ಬ ಯೋಧ ತೀವ್ರವಾಗಿ ಗಾಯಗೊಂಡಿದ್ದರು. ಸಮೀಪದ ಅರಣ್ಯದಲ್ಲಿ ಅಡಗಿ ಕುಳಿತ ಉಗ್ರರು ಈ ದುಷ್ಕೃತ್ಯ ನಡೆಸಿದ್ದರು. ಅಷ್ಟೂ ಸಾಲದು ಎಂಬಂತೆ ಗುಂಡಿನ ದಾಳಿ ನಡೆಸಿದ್ದರು. ನಾಪತ್ತೆಯಾಗಿರುವ ಉಗ್ರರ ಪತ್ತೆ/ಎನ್​ಕೌಂಟರ್​ ಕಾರ್ಯಾಚರಣೆ ನಡೆಯುತ್ತಿದೆ.

Exit mobile version