Site icon Vistara News

ಪಿಎಫ್‌ಐ ಸಂಘಟನೆಯಿಂದ ಮೋದಿ ಹತ್ಯೆ ಸಂಚು, ಬಿಹಾರದಲ್ಲಿ ಇಬ್ಬರು ಉಗ್ರರ ಸೆರೆ

Narendra Modi

ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜುಲೈ 12ರಂದು ಬಿಹಾರಕ್ಕೆ ಭೇಟಿ ನೀಡಿದ್ದಾಗ ಅವರನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆತಂಕಕಾರಿ ವಿಚಾರವೀಗ ಬೆಳಕಿಗೆ ಬಂದಿದೆ. ಬಿಹಾರದ ಪಾಟ್ನಾದಲ್ಲಿ ಇಂದು (ಜು.೧೪) ಪೊಲೀಸರು ಶಂಕಿತ ಉಗ್ರರ ಘಟಕವನ್ನು ಭೇದಿಸಿದ್ದಾರೆ. ಅಥರ್ ಪರ್ವೇಜ್ ಮತ್ತು ಎಂಡಿ ಜಲಾಲುದ್ದೀನ್ ಬಂಧಿತ ಶಂಕಿತ ಉಗ್ರರಾಗಿದ್ದಾರೆ.

ಇವರಿಂದ ಎರಡು ದಾಖಲೆಗಳನ್ನು, ಪಿಎಫ್‌ಐನ 25 ಕರಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಒಂದು ದಾಖಲೆಯ ಮೇಲೆ ‘2047 India Towards Rule of Islamic India (2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾರ್ಪಡಿಸುವುದು)’ ಎಂಬ ತಲೆ ಬರಹ ಇದೆ. ಈ ಘಟಕದ ಪ್ರಮುಖ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡುವುದಾಗಿತ್ತು ಎಂಬ ವಿಚಾರ ಹೊರಬಿದ್ದಿದೆ.

ಪ್ರಧಾನಿ ನರೇಂದ್ರ ಮೋದಿ ಜುಲೈ 12ಕ್ಕೆ ಬಿಹಾರಕ್ಕೆ ಆಗಮಿಸಲಿದ್ದಾರೆ ಎಂಬ ವಿಷಯವನ್ನು ತಿಳಿದಿದ್ದ ಈ ಉಗ್ರರು ಅದಕ್ಕೂ 15 ದಿನಗಳ ಮುಂಚೆಯೇ ಬಂದು ಫುಲ್ವಾರಿ ಶರೀಫ್‌ನಲ್ಲಿ ಬೀಡು ಬಿಟ್ಟಿದ್ದರು. ಅಲ್ಲಿಯೇ ತರಬೇತಿ ಕೂಡ ಪಡೆಯುತ್ತಿದ್ದರು. ನರೇಂದ್ರ ಮೋದಿಯವರನ್ನು ಹೇಗೆ ಟಾರ್ಗೆಟ್‌ ಮಾಡಬಹುದು? ಅವರ ಹತ್ಯೆಗೆ ಏನು ಯೋಜನೆ ರೂಪಿಸಬಹುದು ಎಂಬುದನ್ನು ಚರ್ಚಿಸಲು ಜುಲೈ 6 ಮತ್ತು 7 ರಂದು ಸಭೆ ಕೂಡ ನಡೆಸಿದ್ದರು ಎಂದೂ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಬಿಹಾರ, ಕೇರಳ, ಪಂಜಾಬ್‌, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಎಂದ ಆರ್‌ಬಿಐ

ಪಾಟ್ನಾದಲ್ಲಿನ ಫುಲ್ವಾರಿ ಶರೀಫ್‌ನಲ್ಲಿ ಶಂಕಿತ ಉಗ್ರರ ಘಟಕ ಸಕ್ರಿಯವಾಗಿದೆ ಎಂಬ ಖಚಿತ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದ ಬೆನ್ನಲ್ಲೇ, ಬಿಹಾರ ಪೊಲೀಸರು ಫುಲ್ವಾರಿ ಶರೀಫ್‌ ಕಚೇರಿ ಮೇಲೆ ದಾಳಿ ನಡೆಸಿದ್ದರು. ಅದಕ್ಕೂ ಮೊದಲು ನಯಾ ಟೋಲಾ ಏರಿಯಾದ ಮೇಲೆ ಕೂಡ ಪೊಲೀಸರು ದಾಳಿ ಮಾಡಿದ್ದರು. ಈ ಫುಲ್ವಾರಿ ಶರೀಫ್‌ಗೆ ಭೇಟಿ ಕೊಡುವ ಬಹುತೇಕ ಯುವಕರು ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಸೇರಿದವರು ಎಂದು ತಿಳಿಸಿರುವ ಪೊಲೀಸರು, ಇದೀಗ ಬಂಧಿತರಾಗಿರುವ ಶಂಕಿತ ಉಗ್ರರು ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಮತ್ತು ಇತರ ಇಸ್ಲಾಮಿಕ್‌ ರಾಷ್ಟ್ರಗಳಿಂದ ಆರ್ಥಿಕ ನೆರವು ಪಡೆಯುತ್ತಿದ್ದಾರೆ ಎಂದೂ ಹೇಳಲಾಗಿದೆ.

ಒಬ್ಬ ನಿವೃತ್ತ ಪೊಲೀಸ್‌ ಅಧಿಕಾರಿ
ಇದೀಗ ಬಂಧಿತರಾದ ಉಗ್ರರಲ್ಲಿ ಮೊಹಮ್ಮದ್‌ ಜಲಾಲುದ್ದೀನ್‌ ಜಾರ್ಖಂಡ್‌ನ ಮಾಜಿ ಪೊಲೀಸ್‌ ಅಧಿಕಾರಿ ಮತ್ತು ಇನ್ನೊಬ್ಬ ಅಥರ್‌ ಫರ್ವೇಜ್‌ ಮೊದಲಿನಿಂದಲೂ ಪಿಎಫ್‌ಐ ಜತೆ ಲಿಂಕ್‌ ಹೊಂದಿದ್ದವ ಎಂಬುದು ಗೊತ್ತಾಗಿದೆ ಎಂದು ಫುಲ್ವಾರಿ ಶರೀಫ್‌ನ ಎಎಸ್‌ಪಿ ಮನೀಶ್‌ ಕುಮಾರ್‌ ತಿಳಿಸಿದ್ದಾರೆ. ಇವರ ಘಟಕ ಸ್ಥಳೀಯ ಯುವಕರನ್ನೂ ಸೆಳೆಯುತ್ತಿತ್ತು. ಅವರಿಗೆ ಖಡ್ಗ, ಚಾಕು ಸೇರಿ ಮಾರಕಾಸ್ತ್ರಗಳನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ಕಲಿಸುತ್ತಿತ್ತು. ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವವರು ತಮ್ಮ ಹೆಸರು, ಗುರುತನ್ನು ಮರೆಮಾಚಿ, ಸುಳ್ಳು ಹೇಳಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ದೇವಗಢದ ಬೈದ್ಯನಾಥನ ದರ್ಶನ ಮಾಡಿದ ಪ್ರಧಾನಿ ಮೋದಿ, ಏನೀ ಕಾರಣಿಕ ದೇಗುಲದ ವಿಶೇಷ?

Exit mobile version