ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 7nE ಮಹತ್ವದ ಸಭೆ ಭಾನುವಾರ (ಆ.೬) ನಡೆಯಲಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ಜತೆಗೆ ಸಹಯೋಗದ ಹೊಸ ಅಧ್ಯಾಯಕ್ಕೆ ಈ ಸಭೆ ಹಾದಿ ಮಾಡಿಕೊಡುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ೨೦೧೯ರ ಜುಲೈ ಬಳಿಕ ಖುದ್ದಾಗಿ ಮೊದಲ ಬಾರಿಗೆ ನೀತಿ ಆಯೋಗದ ಸಭೆ ನಡೆಸುತ್ತಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಕೃಷಿ, ಶಿಕ್ಷಣ, ಆರ್ಥಿಕತೆ ಬಗ್ಗೆ ಚರ್ಚೆ ನಡೆಯಲಿದೆ.
ಬೆಳೆಗಳ ವೈವಿಧ್ಯ, ತೈಲ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿತನ, ರಾಷ್ಟ್ರೀಯ ಶಿಕ್ಷಣ ನೀತಿ, ನಗರಾಡಳಿತ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ನೀತಿ ಆಯೋಗ ತಿಳಿಸಿದೆ. ಮಾತ್ರವಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಹಯೋಗ ಮತ್ತು ಸಮನ್ವಯದ ನಿಟ್ಟಿನಲ್ಲಿ ಸಮಗ್ರ ಕಾರ್ಯಸೂಚಿ ಬಗ್ಗೆ ಚರ್ಚೆ ನಿರೀಕ್ಷಿಸಲಾಗಿದೆ.