ನವ ದೆಹಲಿ: ಲಡಾಕ್‌ನ ಕ್ಲಿಷ್ಟಕರ ಗಡಿ ಭಾಗಗಳಲ್ಲಿ ಚೀನಾದ ಉಪಟಳವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಸೇನಾಪಡೆಗೆ ನೆರವಾಗಬಲ್ಲ ಹೊಸ ಯುದ್ಧ ವಾಹನಗಳನ್ನು ಹಸ್ತಾಂತರಿಸಲಾಗಿದೆ. ಇವುಗಳನ್ನು ನಮ್ಮ ದೇಶದಲ್ಲಿಯೇ ತಯಾರಿಸಲಾಗಿದೆ.
ಸಮುದ್ರ ಮಟ್ಟದಿಂದ ೧೬,೦೦೦ ಅಡಿ ಎತ್ತರದಲ್ಲಿರುವ ಲಡಾಕ್‌ನ ಗಿರಿ ಶ್ರೇಣಿಗಳ ದುರ್ಗಮ ಮಾರ್ಗಗಳಲ್ಲಿ ಈ ಯುದ್ಧ ವಾಹನಗಳು ಸೇನೆಗೆ ಕ್ಷಿಪ್ರ ಕಾರ್ಯಾಚರಣೆಗಳನ್ನು ನಡೆಸಲು, ಗಸ್ತು ತಿರುಗಲು ಉಪಯುಕ್ತವಾಗಲಿದೆ.
೧೨ ಹೊಸ ಯುದ್ಧ ವಾಹನಗಳನ್ನು ನೀಡಲಾಗಿದ್ದು, ಇವುಗಳನ್ನು ಇನ್‌ಫೆಂಟ್ರಿ ಪ್ರೊಟೆಕ್ಡೆಡ್ ಮೊಬಿಲಿಟಿ ವೆಹಿಕಲ್ (Infantry Protected Mobility Vehicle) ಎಂದು ಕರೆಯಲಾಗುತ್ತದೆ. ಪೂರ್ವ ಲಡಾಕ್‌ನಲ್ಲಿ ಕಠಿಣ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಈ ವಾಹನಗಳು ಸಹಕಾರಿ. ೩೬೦ ಡಿಗ್ರಿ ಮೆಷೀನ್ ಗನ್ ಹಾಗೂ ಗುಂಡುಗಳನ್ನು ಹಾರಿಸಲು ೧೦ ಸ್ಥಳದ ವ್ಯವಸ್ಥೆಯನ್ನು ವಾಹನ ಒಳಗೊಂಡಿದೆ. ಇಡೀ ವಾಹನ ಬುಲೆಟ್ ಪ್ರೂಫ್ ಆಗಿದೆ. ರಾತ್ರಿ ಕೂಡ ಇದನ್ನು ಬಳಸಬಹುದು.
ಡಿಆರ್‌ಡಿಒ ಮತ್ತು ಟಾಟಾ ಗ್ರೂಪ್ ಜಂಟಿ ಸಹಭಾಗಿತ್ವದಲ್ಲಿ ಈ ಸುಸಜ್ಜಿತ ವಾಹನವನ್ನು ಉತ್ಪಾದಿಸಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ವಾಹನ ಒಳಗೊಂಡಿದ್ದು, ಸೇನಾ ಕಾರ್ಯಾಚರಣೆಗೆ ಅನುಕೂಲವಾಗಲಿದೆ.