ನವ ದೆಹಲಿ: ಅಗ್ನಿಪಥ್ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅಂಥ ಯುವಜನರನ್ನು ಆ ಯೋಜನೆಯ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದಿಲ್ಲ ಎಂದು ಸೇನೆ ಭಾನುವಾರ ಎಚ್ಚರಿಸಿದೆ.
ಮುಂದಿನ ವಾರದಿಂದ ಆರಂಭವಾಗಲಿರುವ ಅಗ್ನಿಪಥ್ ಯೋಜನೆಯನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನವೆಂಬರ್-ಡಿಸೆಂಬರ್‌ನಲ್ಲಿ ಅಗ್ನಿವೀರರ ಮೊದಲ ಬ್ಯಾಚ್‌ನ ತರಬೇತುಯೂ ಆರಂಭವಾಗಲಿದೆ ಎಂದು ಸೇನಾ ವ್ಯವಹಾರಗಳ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ತಿಳಿಸಿದ್ದಾರೆ.
ಪೊಲೀಸ್ ದೃಢೀಕರಣ ಕಡ್ಡಾಯ
ಸಮಾಜ ಘಾತುಕ ಶಕ್ತಿಗಳು ಹಾಗೂ ಯುವಜನರನ್ನು ಸೇನಾ ನೇಮಕಾತಿ ಪರೀಕ್ಷೆಗೆ ತರಬೇತುಗೊಳಿಸುವ ಕೋಚಿಂಗ್ ಸೆಂಟರ್‌ಗಳು ಹಿಂಸಾತ್ಮಕ ಪ್ರತಿಭಟನೆಗೆ ಕುಮ್ಮಕ್ಕು ನೀಡಿವೆ ಎಂದು ಅವರು ತಿಳಿಸಿದರು.
ಸೇನೆಯಲ್ಲಿ ಯಾವುದೇ ರೀತಿಯ ಅಶಿಸ್ತಿಗೆ ಆಸ್ಪದವಿಲ್ಲ. ಅಗ್ನಿಪಥ್ ಯೋಜನೆಯಡಿ ನೇಮಕಾತಿ ಬಯಸುವ ಪ್ರತಿಯೊಬ್ಬ ಆಕಾಂಕ್ಷಿಗಳೂ ಯೋಜನೆ ವಿರುದ್ಧದ ಪ್ರತಿಭಟನೆಗಳಲ್ಲಿ ಹಾಗೂ ಹಿಂಸಾಚಾರದಲ್ಲಿ ಭಾಗವಹಿಸಿಲ್ಲ ಎಂದು ಲಿಖಿತ ರೂಪದಲ್ಲಿ ವಾಗ್ದಾನ ನೀಡಬೇಕು. ಜತೆಗೆ ಪೊಲೀಸ್ ಇಲಾಖೆ ದಾಖಲಿಸಿರುವ ಎಫ್‌ಐಆರ್‌ಗಳನ್ನೂ ಪರಿಶೀಲಿಸಲಾಗುವುದು. ಗಲಭೆಯ ವಿಡಿಯೊ, ಫೊಟೊಗಳನ್ನು ಆಧಾರ್ ದೃಢೀಕರಣದ ಮೂಲಕ ಖಾತರಿಪಡಿಸಿಕೊಳ್ಳಲಾಗುವುದು. ಪೊಲೀಸ್ ದೃಢೀಕರಣ ಇಲ್ಲದೆ ಯಾರೊಬ್ಬರಿಗೂ ಸೇನೆಗೆ ಸೇರಿಕೊಳ್ಳಲು ಸಾಧ್ಯವಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಪುರಿ ವಿವರಿಸಿದರು.
ಎಂಟು ರಾಜ್ಯಗಳಲ್ಲಿ ಅಗ್ನಿಪಥ್ ವಿರೋಧಿಸಿ ಯುವಕರು ಬೀದಿಗೀಳಿದಿದ್ದರು.