Site icon Vistara News

ಸಂಪಾದಕೀಯ: ಸ್ಫೋಟ ಆಘಾತಕಾರಿ, ಕೇರಳದ ಮತಾಂಧರನ್ನು ಮಟ್ಟ ಹಾಕಿ

Bomb Blast

ಕೇರಳದ ಎರ್ನಾಕುಲಂನ ಚರ್ಚ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೆಹೊವಾಹ್ ವಿಟ್ನೆಸಸ್ ಸಮಾವೇಶದಲ್ಲಿ ಸರಣಿ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡು, ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಕಳವಳಕಾರಿ. ಮಕ್ಕಳೂ ಸೇರಿದಂತೆ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಪೊಲೀಸರ ಪ್ರಾರಂಭಿಕ ತನಿಖೆ ಪ್ರಕಾರ ಇದು ದುಷ್ಕೃತ್ಯ ಎನ್ನುವುದು ಖಚಿತವಾಗಿದೆ. ಸಭಾಂಗಣದ ಕೆಲವೆಡೆ ಟಿಫನ್‌ ಬಾಕ್ಸ್‌ನಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಕುಕೃತ್ಯ ಎಸಗಿರುವುದು ಖಚಿತವಾಗಿದೆ. ಇದೊಂದು ಹೇಯ ಕೃತ್ಯ ಮತ್ತು ಖಂಡನೀಯ.

ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಈ ಸ್ಫೋಟದ ಜವಾಬ್ದಾರಿ ಹೊತ್ತಿದ್ದು, ವಿಡಿಯೊ ಮೂಲಕ ತಾನು ಎಸಗಿದ ಕೃತ್ಯವನ್ನು ವಿವರಿಸಿದ್ದಾನೆ ಮತ್ತು ಪೊಲೀಸರಿಗೆ ಶರಣಾಗಿದ್ದಾನೆ. ಕ್ರಿಶ್ಚಿಯನ್ ಪಂಥವನ್ನು ಗುರಿಯಾಗಿಸಿ ತಾನು ಈ ಸ್ಫೋಟ ನಡೆಸಿದೆ ಎನ್ನುವುದನ್ನು ಆತ ವಿವರಿಸಿದ್ದಾನೆ. ಆರೋಪಿ ಡೊಮಿನಿಕ್ ಮಾರ್ಟೀನ್ ಕೂಡ, ಭಾನುವಾರ ಬೆಳಗ್ಗೆ ಕಾರ್ಯಕ್ರಮ ಆಯೋಜಿಸಿದ್ದ ಜೆಹೊವಾಹ್ ವಿಟ್ನೆಸಸ್ ಗುಂಪಿನ ಸದಸ್ಯ ಎಂದು ತಿಳಿದು ಬಂದಿದೆ. ತಾನು ಎಸಗಿರುವ ಕೃತ್ಯಕ್ಕೆ ಆರೋಪಿ ಡೊಮಿನಿಕ್ ಮಾರ್ಟೀನ್ ಪೊಲೀಸರಿಗೆ ಸಾಕ್ಷ್ಯವನ್ನೂ ಒದಗಿಸಿರುವುದು ಆಶ್ಚರ್ಯಕರ ಮತ್ತು ವಿಲಕ್ಷಣ ಸಂಗತಿಯಾಗಿದೆ. ತಾನು ಜೆಹೊವಾಹ್ ವಿಟ್ನೆಸಸ್ ಬೋಧನೆಗಳನ್ನು ಒಪ್ಪುವುದಿಲ್ಲ. ಹಾಗಾಗಿ ಅವರ ಚಟುವಟಿಕೆಗಳನ್ನು ನಿಲ್ಲಿಸಲು ಈ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಈ ಕೃತ್ಯ ಎಸಗಿರುವುದು ಇದೇ ವ್ಯಕ್ತಿಯೇ ಅಥವಾ ಇದು ದಾರಿ ತಪ್ಪಿಸುವ ಉಪಾಯವೇ ಎಂಬ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ನಡೆಸಬೇಕಿದೆ.

ಇಡೀ ದೇಶದಲ್ಲೇ ಕೇರಳ ಮೂಲಭೂತವಾದಿಗಳ ಆಡೊಂಬೊಲವಾಗಿ, ಒಂದಲ್ಲ ಒಂದು ಹಿಂಸಾಕೃತ್ಯಗಳ ತವರಾಗಿ ಮಾರ್ಪಟ್ಟಿದೆ. ದಶಕಗಳ ಹಿಂದೆ ದೇಶಾದ್ಯಂತ ಭಯೋತ್ಪಾದಕ ಕೃತ್ಯ ಎಸಗುತ್ತಿದ್ದ ʼಸಿಮಿʼ ಸಂಘಟನೆಯ ಕ್ರಿಮಿಗಳು ಕುಕೃತ್ಯಗಳ ಜಾಲವನ್ನು ಕೇರಳದಲ್ಲೇ ಕುಳಿತು ಹೆಣೆಯುತ್ತಿದ್ದರು. ಸಿರಿಯಾ ಮತ್ತಿತರ ಇಸ್ಲಾಮಿಕ್‌ ದೇಶಗಳಲ್ಲಿ ಬಾಲ ಬಿಚ್ಚಿ ಕೆಲ ಕಾಲ ವಿಶ್ವವನ್ನೇ ಭೀತಿಯಲ್ಲಿ ಮುಳುಗಿಸಿದ್ದ ಐಸಿಸ್‌ ಉಗ್ರರು ಸಕ್ರಿಯವಾಗಿದ್ದುದೂ ಕೇರಳದಲ್ಲೇ. ಲವ್‌ ಜಿಹಾದ್‌ ಜಾಲ ಮೊದಲು ಸುದ್ದಿಯಾಗಿದ್ದು ಈ ರಾಜ್ಯದಲ್ಲೇ. ಕೇರಳದ ಹಲವಾರು ಹಿಂದೂ ಮತ್ತು ಕ್ರಿಶ್ಚಿಯನ್‌ ಯುವತಿಯರನ್ನು ಲವ್‌ ಜಿಹಾದ್‌ ಖೆಡ್ಡಾಗೆ ಬೀಳಿಸಿ ಸಿರಿಯಾ ಮತ್ತಿತರ ಕಡೆಗಳಲ್ಲಿನ ಇಸ್ಲಾಮಿಕ್‌ ಉಗ್ರರ ಕೈಗೆ ಒಪ್ಪಿಸಿ ಕ್ರೌರ್ಯ ಮೆರೆದವರ ನೆಲೆ ಕೇರಳ ಎನ್ನುವುದನ್ನು ಮರೆಯುವಂತಿಲ್ಲ. ಹಲವಾರು ಮೂಲಭೂತ ಸಂಘಟನೆಗಳು ಕೇರಳದಲ್ಲಿ ಸಕ್ರಿಯವಾಗಿ ಇಡೀ ದೇಶದಲ್ಲಿ ಭೀತಿ ಹರಡುತ್ತಿವೆ. ಕೆಲ ತಿಂಗಳ ಹಿಂದೆ ಮತಾಂಧನೊಬ್ಬ ರೈಲ್ವೆ ಬೋಗಿಯಲ್ಲಿ ಮಲಗಿದ ಅಮಾಯಕರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಸಾಯಿಸಿದ್ದ. ಈ ಘಟನೆ ನಡೆದಿದ್ದೂ ಕೇರಳದಲ್ಲೇ. ದೇಶದ ಯಾವುದೇ ಮೂಲೆಯಲ್ಲಿ ವಿಧ್ವಂಸಕ ಕೃತ್ಯ ನಡೆದರೂ ಅದರ ಬೇರು ಇರುವುದು ಕೇರಳದಲ್ಲಿ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಕಳೆದ ಹಲವು ದಶಕಗಳಿಂದ ಮತಾಂಧ ಶಕ್ತಿಗಳು ಕೇರಳದ ಹಿಂದೂ ಮತ್ತು ಕ್ರೈಸ್ತರ ಮೇಲೆ ದಾಳಿ ನಡೆಸುತ್ತ, ಸರಣಿ ಕೊಲೆಗಳನ್ನು ನಡೆಸುತ್ತ ಬಂದಿವೆ.

ಇದನ್ನೂ ಓದಿ: ಸಂಪಾದಕೀಯ: ಕಳಪೆ ಕ್ರಿಕೆಟ್ ಅಂಪೈರಿಂಗ್, ತಂತ್ರಜ್ಞಾನ ಆಧರಿತ ತೀರ್ಪಿನಲ್ಲೂ ವ್ಯತ್ಯಯ ಆಗದಿರಲಿ

ಕೇರಳದಲ್ಲಿ ನಿರಂತರವಾಗಿ ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ ಸರದಿಯಂತೆ ಅಧಿಕಾರ ನಡೆಸುತ್ತ ಬಂದಿವೆ. ಕೇರಳದಲ್ಲಿ ಮೂಲಭೂತವಾದಿ ಸಂಘಟನೆಗಳು ಬಲಗೊಳ್ಳಲು, ಅಲ್ಲಿ ನಿರಂತರವಾಗಿ ಒಂದಲ್ಲ ಒಂದು ಭಯೋತ್ಪಾದಕ ಘಟನೆಗಳು ನಡೆಯಲು ಇಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳೇ ಹೊಣೆ. ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಮತ ಬ್ಯಾಂಕ್‌ ರಾಜಕಾರಣದ ಫಲವಾಗಿ ಕೇರಳದಲ್ಲಿ ಉಗ್ರ ಸಂಘಟನೆಗಳಿಗೆ ಪುಷ್ಟಿ ಸಿಗುತ್ತಿದೆ. ಇದು ಕೇರಳ ಮಾತ್ರವಲ್ಲ, ಇಡೀ ದೇಶಕ್ಕೇ ಅಪಾಯಕಾರಿಯಾಗಿದೆ. ಇತ್ತೀಚೆಗೆ ಕೇರಳದಲ್ಲಿ ಹಮಾಸ್‌ ಉಗ್ರರ ಪರ ಕಾರ್ಯಕ್ರಮವನ್ನೇ ನಡೆಸಲಾಗಿದೆ. ಅಷ್ಟೇ ಅಲ್ಲ ಹಮಾಸ್‌ ಉಗ್ರನೊಬ್ಬ ಆನ್‌ಲೈನ್‌ ಮೂಲಕ ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾನೆ ಎಂದು ವರದಿಯಾಗಿದೆ. ಇದು ಕೇರಳದಲ್ಲಿನ ಮತಾಂಧ ವಾತಾವರಣಕ್ಕೆ ತಾಜಾ ಸಾಕ್ಷಿಯಷ್ಟೆ.

ಎನ್‌ಐಎ ಇತ್ಯಾದಿ ಕೇಂದ್ರದ ತನಿಖಾ ಸಂಸ್ಥೆಗಳು ಕೇರಳದಲ್ಲಿನ ಮೂಲಭೂತವಾದಿ ಚಟುವಟಿಕೆಗಳ ಮೇಲೆ ಮತ್ತಷ್ಟು ನಿಗಾ ವಹಿಸಿ, ಉಗ್ರ ಸಂಘಟನೆಗಳನ್ನು ಬಗ್ಗು ಬಡಿಯಬೇಕಿದೆ. ಎರ್ನಾಕುಲಂನಲ್ಲಿ ನಡೆದ ಘಟನೆಗೆ ಬೇರೆ ಏನಾದರು ಆಯಾಮ ಇದೆಯೇ, ಇಸ್ರೇಲ್‌-ಪ್ಯಾಲೆಸ್ತಿನ್‌ ಬಿಕ್ಕಟ್ಟಿನ ನಂಟು ಇದೆಯೇ ಎಂಬ ಬಗ್ಗೆಯೂ ಆಳವಾಗಿ ತನಿಖೆ ನಡೆಸಬೇಕಿದೆ. ಕೇರಳದ ಮತಾಂಧರನ್ನು ಮಟ್ಟ ಹಾಕಿದರೆ ಇಡೀ ದೇಶಕ್ಕೇ ಕ್ಷೇಮ.

Exit mobile version