ಮಧುಮಲೆ: ಚಾಮರಾಜನಗರ ಜಿಲ್ಲೆ ಬಂಡೀಪುರ ಅರಣ್ಯದಲ್ಲಿ ಸಫಾರಿ ಕೈಗೊಂಡ ಬಳಿಕ ತಮಿಳುನಾಡಿನ ಮಧುಮಲೈಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಆಸ್ಕರ್ ಪ್ರಶಸ್ತಿ ಪುರಸ್ಕೃತ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿಯಾಗಿ, ಅವರ ಜತೆ ಮಾತುಕತೆ ನಡೆಸಿದರು.
ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದ ಅವರು ದಂಪತಿ ಜತೆಗೂಡಿ ಆನೆಗಳಿಗೆ ಆಹಾರ ತಿನ್ನಿಸಿದರು. ಶಿಬಿರದಲ್ಲಿರುವ ಆನೆಗಳನ್ನು ವೀಕ್ಷಿಸಿದ ಮೋದಿ, ರಾಣಿ ಎಂಬ ಹೆಸರಿನ ಆನೆಗೆ ಕಬ್ಬು ಕೊಟ್ಟರು. ಬಳಿಕ ಆನೆಯ ಸೊಂಡಿಲು ಸವರಿದರು.
ಬೊಮ್ಮ-ಬೆಳ್ಳಿ ದಂಪತಿ ಜತೆ ಆನೆಗಳ ವೀಕ್ಷಣೆ ಮಾಡಿದ ಮೋದಿ
ಹಾಗೆಯೇ, ಆನೆಗಳ ಪಾಲಕರಾದ ದೇವನ್, ಕುಳ್ಳನ್ ಹಾಗೂ ಕಿರುಮಾರನ್ ಅವರ ಜತೆಗೂ ಮೋದಿ ಮಾತನಾಡಿದರು. ಹುಲಿಗಳನ್ನು ಸೆರೆ ಹಿಡಿಯುವ ಸಿಬ್ಬಂದಿ ಜತೆಗೂ ಮೊದಿ ಮಾತನಾಡಿದರು. ಆನೆಗಳ ಪಾಲನೆ ಮಾಡುವುದು, ಅವುಗಳ ಮರಿಗಳನ್ನು ಸಂರಕ್ಷಿಸುವುದು ಸೇರಿ ಸಿಬ್ಬಂದಿ ವಿವಿಧ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮೋದಿ ಅವರಿಗೆ ಬೊಮ್ಮ ಮನವಿ
ಮಧುಮಲೈನಲ್ಲಿ ವಾಸವಿರುವ ಸೋಲಿಗ ಜನಾಂಗದವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಪ್ರಧಾನಿಗೆ ಬೊಮ್ಮ ಮನವಿ ಮಾಡಿದರು. ಹಾಗೆಯೇ ಸೋಲಿಗ ಸಮುದಾಯದ ಮಕ್ಕಳಿಗೆ ಲ್ಯಾಪ್‌ಟಾಪ್‌ಗಳನ್ನೂ ನೀಡುವಂತೆ ಮನವಿ ಮಾಡಿದರು. ಈ ಕುರಿತು ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಬೊಮ್ಮ, “ಮೋದಿ ಅವರನ್ನು ಭೇಟಿಯಾಗಿದ್ದು ನಮಗೆ ಖುಷಿಯಾಗಿದೆ” ಎಂದು ಹೇಳಿದರು.
ಕೆಲ ದಿನಗಳ ಹಿಂದಷ್ಟೇ ಮೋದಿ ಅವರು ದಿ ಎಲಿಫೆಂಟ್ ವಿಸ್ಪರರ್ಸ್ ತಂಡವನ್ನು ಭೇಟಿ ಮಾಡಿದ್ದರು. ಸಿನಿಮಾದ ನಿರ್ದೇಶಕಿ ಕಾರ್ತಿಕಿ ಗೊನ್ಸಲ್ವೆಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಅವರೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದ ಮೋದಿ, “ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ತೇಜಸ್ಸು ಮತ್ತು ಯಶಸ್ಸು ಜಾಗತಿಕ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನೂ ಗಳಿಸಿದೆ. ಇಂದು, ಅದಕ್ಕೆ ಸಂಬಂಧಿಸಿದ ಅದ್ಭುತ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ”ಎಂದು ಅವರು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Modi in Karnataka : ಬಂಡಿಪುರದಲ್ಲಿ 20 ಕಿ.ಮೀ ಟೈಗರ್ ಸಫಾರಿ, ತೆಪ್ಪಕಾಡಿನಲ್ಲಿ ಆನೆಗಳಿಗೆ ಕಬ್ಬು ತಿನ್ನಿಸಿದ ಪ್ರಧಾನಿ ಮೋದಿ