ನವದೆಹಲಿ: ಸುಪ್ರೀಂ ಕೋರ್ಟ್‌ನ (Supreme Court) ಐವರು ನೂತನ ನ್ಯಾಯಮೂರ್ತಿಗಳು ಸೋಮವಾರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು ನೂತನ ಜಡ್ಜ್‌ಗಳಿಗೆ ಆಡಳಿತಾತ್ಮಕ ಪ್ರತಿಜ್ಞಾ ವಿಧಿ ಬೋಧಿಸಿದರು. ಸುಪ್ರೀಂ ಕೋರ್ಟ್‌ನ ಆರು ಸದಸ್ಯರ ಕೊಲಿಜಿಯಂ ಕಳೆದ ವರ್ಷ ಡಿಸೆಂಬರ್ 13 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ಎಲ್ಲಾ ಈ ಐವರು ಹೆಸರನನ್ನು ಶಿಫಾರಸು ಮಾಡಿತ್ತು. ಫೆಬ್ರವರಿ 4ರಂದು ಕಾನೂನು ಸಚಿವರು ನೇಮಕಾತಿಗೆ ಹಸಿರು ನಿಶಾನೆ ತೋರಿಸಿದ್ದರು.
ಇವರು ನೂತನ ನ್ಯಾಯಮೂರ್ತಿಗಳು
ನ್ಯಾಯಮೂರ್ತಿ ಪಂಕಜ್ ಮಿಥಾಲ್, ನ್ಯಾಯಮೂರ್ತಿ ಸಂಜಯ್ ಕರೋಲ್, ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್, ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ. ಈ ಐವರು ನ್ಯಾಯಮೂರ್ತಿಗಳ ನೇಮಕದೊಂದಿಗೆ ಈಗ ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಹಾಗಿದ್ದೂ, ಇನ್ನೂ ಇಬ್ಬರು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ.
ಕೇಂದ್ರ ಸರ್ಕಾರ-ಸುಪ್ರೀಂ ಕೋರ್ಟ್ ಹಗ್ಗ ಜಗ್ಗಾಟ
ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಗೆ (Supreme Court Collegium) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ನಡುವಿನ ಸಂಘರ್ಷ ಇನ್ನೂ ನಿಂತಿಲ್ಲ. ಕೆಲವು ದಿನಗಳ ಹಿಂದೆ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು, ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯಲ್ಲಿ ಸರ್ಕಾರದ ಪ್ರತಿನಿಧಿಗೂ ಅವಕಾಶ ಕಲ್ಪಿಸಬೇಕೆಂದು ಕೋರಿದೆ. ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಈ ಪತ್ರ ಬರೆದಿದ್ದರು.
ಇದನ್ನೂ ಓದಿ: Kiren Rijiju: ಸುಪ್ರೀಂ ಕೋರ್ಟ್ ನಮಗೆ ಎಚ್ಚರಿಕೆ ನೀಡುವ ಹಾಗಿಲ್ಲ, ಬಿಕ್ಕಟ್ಟು ಮುಂದುವರಿಸಿದ ಕಿರಣ್ ರಿಜಿಜು
ನ್ಯಾಯಮೂರ್ತಿಗಳ ನೇಮಕದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವವನ್ನು ಕಾಪಾಡುವುದಕ್ಕಾಗಿ ಕೊಲಿಜಿಯಂ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗೂ ಅವಕಾಶ ಕಲ್ಪಿಸಬೇಕೆಂದು ಕೋರಿದ್ದರು. ಈಗ ಬರೆದಿರುವ ಪತ್ರವು ಈ ಹಿಂದೆ ನ್ಯಾಯಮೂರ್ತಿಗಳಿಗೆ ಬರೆದ ಪತ್ರಗಳ ಮುಂದುವರಿದ ಭಾಗವೇ ಆಗಿದೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‌ಜೆಎಸಿ)ವನ್ನು ರದ್ದು ಮಾಡುವಾಗ, ಜಡ್ಜ್ ನೇಮಕ ವ್ಯವಸ್ಥೆಯ ಪುನರ್ ರಚನೆಯ ಬಗ್ಗೆ ಸಂವಿಧಾನಪೀಠವು ತಿಳಿಸಿತ್ತು ಎಂದು ಕಿರೆನ್ ರಿಜಿಜು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.