ಭೋಪಾಲ್: ಲೋಕಸಭೆ ಚುನಾವಣೆ (Lok Sabha Election 2024) ಸಮೀಪಿಸುತ್ತಿದೆ. ಇದಕ್ಕಾಗಿ ಎಲ್ಲ ಪಕ್ಷಗಳು ಸಕಲ ರೀತಿಯಲ್ಲಿ ಸಿದ್ಧವಾಗುತ್ತಿವೆ. ಇನ್ನು ಚುನಾವಣೆ ಸಮೀಪಿಸುತ್ತಲೇ ಎದುರಾಳಿ ಪಕ್ಷದ ಅಭ್ಯರ್ಥಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಹೀಯಾಳಿಸುವುದು, ವೈಯಕ್ತಿಕ ದಾಳಿ ಮಾಡುವ ಪ್ರಕ್ರಿಯೆಯು ಎಲ್ಲ ಪಕ್ಷಗಳ ನಾಯಕರೂ ಮಾಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನರೇಂದ್ರ ಮೋದಿ (Narendra Modi) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, “ಯಾರ ಮನೆಯ ಟಿವಿಯಲ್ಲಿ ನರೇಂದ್ರ ಮೋದಿ ಫೋಟೊ ಕಾಣಿಸುತ್ತದೆಯೋ, ಆ ಮನೆಗೆ ದಾರಿದ್ರ್ಯ ಅಂಟುತ್ತದೆ” ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಇದೇ ವೇಳೆ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. “ನೀವು ಬೆಳಗ್ಗೆ ಎದ್ದೇಳುತ್ತಲೇ ಟಿವಿ ಆನ್ ಮಾಡಿದರೆ ಸಾಕು, ನರೇಂದ್ರ ಮೋದಿ ಅವರ ಫೋಟೊ ಕಾಣಿಸುತ್ತದೆ. ಯಾರ ಮನೆಯ ಟಿವಿಯಲ್ಲಿ ಮೋದಿ ಫೋಟೊ ಕಾಣಿಸುತ್ತದೆಯೋ, ಆ ಮನೆಗೆ ದಾರಿದ್ರ್ಯ ಅಂಟಿದಂತೆಯೇ” ಎಂದು ಹೇಳಿದ್ದಾರೆ. ಖರ್ಗೆ ಅವರು ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WATCH | During Bharat Jodo Nyay Yatra in Madhya Pradesh's Dhar, Congress President Mallikarjun Kharge says, "The moment you switch on the TV, you see Modi on it. The household where Modi's photo comes on TV goes into poverty…." pic.twitter.com/3xHTadWx35
— ANI (@ANI) March 6, 2024
“ನರೇಂದ್ರ ಮೋದಿ ಅವರ ಫೋಟೊ ನೋಡಿದರೆ, ಆ ಮನೆಗೆ ದಾರಿದ್ರ್ಯ ಅಂಟುತ್ತದೆ. ಏಕೆಂದರೆ, ನರೇಂದ್ರ ಮೋದಿ ಅವರಿಗೆ ಬಡವರು ಎಂದರೆ ಆಗಿಬರುವುದಿಲ್ಲ. ನರೇಂದ್ರ ಮೋದಿ ಅವರು ವಿಕಾಸವನ್ನು ಬಯಸುವುದಿಲ್ಲ. ಬಡವರು ಏಳಿಗೆ ಹೊಂದುವುದು ಅವರಿಗೆ ಇಷ್ಟವಿಲ್ಲ. ಬಡವರ ಮಕ್ಕಳು ಶಿಕ್ಷಣ ಪಡೆಯುವುದು ಅವರಿಗೆ ಇಷ್ಟವಾಗುವುದಿಲ್ಲ. ಏಕೆಂದರೆ, ಬಡವರು ಓದಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಂಡರೆ ಅವರಿಗೆ ಕಷ್ಟವಾಗುತ್ತದೆ. ಹಾಗಾಗಿ, ಅವರು ಯಾವಾಗಲೂ ಬಡವರ ಮಕ್ಕಳ ವಿರುದ್ಧ ನಿಲುವು ತಾಳುತ್ತಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇದನ್ನೂ ಓದಿ: Rahul Gandhi: ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು ಎಂದ ರಾಹುಲ್ ಗಾಂಧಿ; ಹೀಗೆ ಹೇಳಿದ್ದೇಕೆ?
ಮಲ್ಲಿಕಾರ್ಜುನ ಖರ್ಗೆ ಅವರು ಇದಕ್ಕೂ ಮೊದಲು ಕೂಡ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. “ನರೇಂದ್ರ ಮೋದಿ ಅವರು ಭಾಷಣ ಮಾಡುವಾಗ ಒಮ್ಮೆಯೂ ತಂದೆಯ ಬಗ್ಗೆ ಹೇಳಿಲ್ಲ” ಎಂದು ಟೀಕಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ಮೋದಿ ಅವರು ಸುಳ್ಳಿನ ರಾಜ ಎಂಬುದಾಗಿ ಖರ್ಗೆ ಕುಟುಕಿದ್ದರು. ಇನ್ನು, ಮೋದಿ ಅವರಿಗೆ ಕುಟುಂಬವೇ ಇಲ್ಲ ಎಂದು ಆರ್‌ಜೆಡಿ ವರಿಷ್ಠ ನಾಯಕ ಲಾಲು ಪ್ರಸಾದ್ ಯಾದವ್ ಅವರು ಹೇಳಿದ್ದು, ಇದನ್ನೇ ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ನಾವೆಲ್ಲರೂ ಮೋದಿ ಪರಿವಾರ ಎಂಬ ಅಭಿಯಾನವನ್ನೇ ಬಿಜೆಪಿ ಆರಂಭಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ