ಡೆಹ್ರಾಡೂನ್: ಆನೆಗಳು ಹಾಗೂ ಮನುಷ್ಯನ ನಡುವಿನ ಅಪರೂಪದ ಅನುಬಂಧವನ್ನು ಬಣ್ಣಿಸುವ ಸಾಕ್ಷ್ಯ ಚಿತ್ರವೊಂದಕ್ಕೆ 95ನೇ ಆಸ್ಕರ್ ಅವಾರ್ಡ್ ಸಿಕ್ಕಿದೆ. ಎಲಿಫೆಂಟ್ ವಿಸ್ಫರರ್ ಡಾಕ್ಯುಮೆಂಟರಿಗೆ ಪುರಸ್ಕಾರ ದೊರೆತ ಸುದ್ದಿ ಜಗತ್ತಿಗೆಲ್ಲ ಪಸರಿಸುತ್ತಿರುವ ನಡುವೆಯೇ ವ್ಯಕ್ತಿಯೊಬ್ಬರು ತಮ್ಮ ಐದು ಕೋಟಿ ರೂಪಾಯಿ ಆಸ್ತಿಯನ್ನು ಆನೆಗಳ ಹೆಸರಿಗೆ ಉಯಿಲು (ವಿಲ್) ಬರೆದ ವರ್ತಮಾನವೊಂದು (Elephant Conservationist ) ಬಹಿರಂಗಗೊಂಡಿದೆ. ಇದು ನಡೆದಿರುವುದು ಉತ್ತಾರಖಂಡದಲ್ಲಿ.
ಐದು ಕೋಟಿ ರೂಪಾಯಿ ಮೌಲ್ಯದ ಸೊತ್ತನ್ನು ಪಡೆದುಕೊಂಡಿರುವ ಆನೆಗಳ ಹೆಸರು ರಾಣಿ ಮತ್ತು ಮೋತಿ. ದುರದೃಷ್ಟವೆಂದರೆ 35 ವರ್ಷದ ಮೋತಿ ಕಳೆದ ತಿಂಗಳು ಮೃತಪಟ್ಟಿದೆ. ಹೀಗಾಗಿ ಅಷ್ಟೂ ಸಂಪತ್ತು 28 ವರ್ಷದ ರಾಣಿಯ ಪಾಲಾಗಿದೆ. ವಿಧಿ ಇನ್ನೂ ವಿಚಿತ್ರ. ಯಾಕೆಂದರೆ ತನ್ನ ಐದು ಕೋಟಿಯ ಆಸ್ತಿಯನ್ನು ಬರೆದ ಆನೆ ಪ್ರೇಮಿ ಅಖ್ತರ್ ಇಮಾಮಾ 2021ರಲ್ಲಿ ಕೊಲೆಯಾಗಿದ್ದಾರೆ. ವಿಲ್ ಪ್ರಕಾರ ಆಸ್ತಿ ರಾಣಿಯ ಹೆಸರಿನಲ್ಲಿದೆ. ಉತ್ತರಾಖಂಡದ ರಾಮ್ನಗರ ಏಷ್ಯನ್ ಎಲೆಫೆಂಟ್ ರಿಹ್ಯಾಬಿಲಿಟೇಶನ್ ಆ್ಯಂಡ್ ವೈಲ್ಡ್ ಲೈಫ್ ಅನಿಮಲ್ ಟ್ರಸ್ಟ್ನಲ್ಲಿ ರಾಣಿಯ ಪೋಷಣೆ ನಡೆಯುತ್ತಿದೆ.
ಅಷ್ಟಕ್ಕೂ ಅಖ್ತರ್ ಇಮಾಮ್ ಬಿಹಾರದವರು . ಹೀಗಾಗಿ ಐದು ಕೋಟಿ ರೂಪಾಯಿಯ ಆಸ್ತಿ ಬಿಹಾರದಲ್ಲಿದೆ. ರಾಣಿ ಉಳಿದುಕೊಂಡಿರುವುದು ಉತ್ತರಾಖಂಡದಲ್ಲಿ. ಅದಕ್ಕೂ ಒಂದು ಕಾರಣವಿದೆ. ಅಖ್ತರ್ ತನ್ನ ಪತ್ನಿಯಿಂದ ಬೇರ್ಪಟ್ಟ ಬಳಿಕ ಜೀವ ಬೆದರಿಕೆ ಎದುರಿಸಿದ್ದರು. ಹೀಗಾಗಿ ಅವರು ತಮ್ಮ ಆಸ್ತಿಯನ್ನು ರಾಣಿ ಮತ್ತು ಮೋತಿಯ ಹೆಸರಿಗೆ ಬರೆದು ಅವುಗಳೊಂದಿಗೆ 2020ರಲ್ಲಿ ರಾಮ್ನಗರಕ್ಕೆ ಬಂದಿದ್ದರು. ಆದರೆ, ದುಷ್ಕರ್ಮಿಗಳು ಅಲ್ಲಿಗೆ ಬಂದು ಅಖ್ತರ್ ಇಮಾಮ್ ಅವರನ್ನು ಕೊಲೆ ಮಾಡಿ ಹೋಗಿದ್ದಾರೆ.
ಇದನ್ನೂ ಓದಿ : Oscars 2023: ‘ನಾನಿನ್ನೂ ನಡುಗುತ್ತಿದ್ದೇನೆ‘; ಆಸ್ಕರ್ ಗೆದ್ದ ಬಳಿಕದ ಉದ್ವೇಗ ವ್ಯಕ್ತಪಡಿಸಿದ ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ಮಾಪಕಿ
ಅಖ್ತರ್ ಕೊಲೆಯಾದ ಬಳಿಕ ರಾಣಿ ಮತ್ತು ಮೋತಿ ಏಷ್ಯನ್ ಎಲೆಫೆಂಟ್ ರಿಹ್ಯಾಬಿಲಿಟೇಶನ್ ಆ್ಯಂಡ್ ವೈಲ್ಡ್ ಲೈಫ್ ಅನಿಮಲ್ ಟ್ರಸ್ಟ್ ಪಾಲಾಗಿದ್ದರು. ಆದರೆ, ತೀವ್ರ ಅನಾರೋಗ್ಯಕ್ಕೆ ಒಳಗಾದ ಮೋತಿ ಕಳೆದ ತಿಂಗಳು ನಿಧನ ಹೊಂದಿದೆ.