ನವದೆಹಲಿ: ಬಿಹಾರ ಸರ್ಕಾರ ನಡೆಸಿದ ಜಾತಿ ಗಣತಿ ಸಮೀಕ್ಷೆಯಿಂದ (Bihar Caste Census) ಸಾಕಷ್ಟು ಅಚ್ಚರಿಯ ಮಾಹಿತಿಗಳು ಹೊರ ಬೀಳುತ್ತಿವೆ. ಬಿಹಾರದ ಒಟ್ಟು ಕುಟುಂಬಗಳ (total Families) ಪೈಕಿ ಶೇ.34 ಕುಟುಂಬಗಳು ತಿಂಗಳಿಗೆ 6000 ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತವನ್ನು ಸಂಪಾದಿಸುತ್ತಿವೆ(monthly earnings). ಅಲ್ಲದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ.42 ಕುಟುಂಬಗಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿವೆ.
ಇದೇ ವೇಳೆ, ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಶೇ.33ರಷ್ಟು ಕುಟುಂಬಗಳನ್ನು ಬಡ ಕುಟುಂಬಗಳೆಂದು ವರ್ಗೀಕರಿಸಲಾಗಿದೆ. ಬಿಹಾರ ಸರ್ಕಾರವು ಈಗ ಎರಡನೇ ಹಂತದ ಜಾತಿ ಗಣತಿಯ ವರದಿಯನ್ನು ಪ್ರಕಟಿಸಿದೆ.
ಸಮೀಕ್ಷೆಗೆ ಒಳಪಟ್ಟವರ ಪೈಕಿ ಶೇ.6ಕ್ಕಿಂತಲೂ ಕಡಿಮೆ ಪ್ರಮಾಣದ ಪರಿಶಿಷ್ಟ ಜಾತಿಯ ಜನರು 11 ಮತ್ತು 12ನೇ ತರಗತಿ ಶಿಕ್ಷಣ ಪಡೆದಿದ್ದಾರೆ. ಈ ಪ್ರಮಾಣವನ್ನು ಒಟ್ಟಾರೆ ರಾಜ್ಯಕ್ಕೆ ಹೋಲಿಸಿದರೆ ತುಸು ಹೆಚ್ಚಿದ್ದು, ಶೇ.9ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
215 ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ತೀವ್ರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಜಾತಿ ಗಣತಿಯ ವರದಿಯನ್ನು ಮಂಗಳವಾರ ಮಧ್ಯಾಹ್ನ ಬಿಹಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಈ ಸುದ್ದಿಯನ್ನೂ ಓದಿ: Bihar Caste Census: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ: ಹಿಂದುಳಿದ 27.12, ಅತಿ ಹಿಂದುಳಿದ ಜಾತಿ 36.01 ಶೇ.
ಬಿಹಾರ ಸರ್ಕಾರವು, ಜಾತಿ ಗಣತಿ ಸಮೀಕ್ಷೆಯ ವೇಳೆ ಯಾದವ್ ಮತ್ತು ಮುಸ್ಲಿಮ್ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಅತಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆರೋಪಿಸಿದ್ದರು. ಈ ಬೆನ್ನಲ್ಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಹಿಂದುಳಿದು ಮತ್ತು ಅತಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರಿಲೀಸ್ ಮಾಡಲಾಗಿದೆ. ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರು, ಯಾದವರು ಹಿಂದುಳಿವರು ಅಲ್ಲವೇ? ಯಾವ ಆಧಾರದ ಮೇಲೆ ಅವರು ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಅಥವಾ ಇಳಿಸಲಾಗಿದೆ ಎಂದು ಹೇಳುತ್ತಿದ್ದಾರೆ. ನಮ್ಮ ಹೇಳಿಕೆಯನ್ನು ಬೆಂಬಲಿಸುವ ವೈಜ್ಞಾನಿಕ ಸಂಖ್ಯೆಗಳನ್ನು ನಾವು ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕಳೆದ ತಿಂಗಳವಷ್ಟೇ ಬಿಹಾರ ಸರ್ಕಾರವು ಜಾತಿ ಗಣತಿಯ ಮೊದಲ ವರದಿಯನ್ನು ಮಂಡಿಸಿತ್ತು. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇ.60ರಷ್ಟು ಜನಸಂಖ್ಯೆ ಹಿಂದುಳಿದ ಅಥವಾ ಅತಿ ಹಿಂದುಳಿದ ವರ್ಗಕ್ಕೆ ಸೇರಿದ್ದಾಗಿದೆ. ಅಲ್ಲದೇ, ಶೇ.20ಕ್ಕೂ ಹೆಚ್ಚು ಜನರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.