ಮುಂಬೈ: ೧೯೯೦ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಚಿತ್ರಣವಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕುರಿತ ಸಿನಿಮಾಗೆ ಭಾರತ ಮಾತ್ರವಲ್ಲ, ವಿದೇಶದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಅವರು ಕಾಶ್ಮೀರಿ ಪಂಡಿತರ ನೆರವಿಗಾಗಿ ೫ ಲಕ್ಷ ರೂ. ದೇಣಿಗೆ ಘೋಷಿಸಿದ್ದಾರೆ.
ದೆಹಲಿಯಲ್ಲಿ ನಡೆದ ಗ್ಲೋಬಲ್ ಕಾಶ್ಮೀರಿ ಪಂಡಿತ್ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, “ದಿ ಕಾಶ್ಮೀರ್ ಫೈಲ್ಸ್ ಸಿನಿಮಾಔು ಕಾಶ್ಮೀರಿ ಪಂಡಿತರ ಸಮಸ್ಯೆಗಳನ್ನು ಜಗಜ್ಜಾಹೀರುಗೊಳಿಸಿದೆ. ಸಿನಿಮಾದಿಂದ ನಾವು ಹೆಚ್ಚಿನ ಹಣ ಗಳಿಸಿದ್ದೇವೆ. ನಾವು ಈಗಾಗಲೇ ಶ್ರೀಮಂತವಾಗಿರುವ ವಿದೇಶಿ ಸಂಸ್ಥೆಗಳಿಗೆ ದೇಣಿಗೆ ನೀಡುತ್ತೇವೆ. ಆದರೆ, ಈಗ ನಮ್ಮ ಜನರಿಗೆ ನೆರವಿನ ಹಸ್ತ ಚಾಚುವ ಸಮಯ ಬಂದೊದಗಿದೆ. ನಾನು ಕಾಶ್ಮೀರಿ ಪಂಡಿತರಿಗಾಗಿ ೫ ಲಕ್ಷ ರೂ ದೇಣಿಗೆ ನೀಡುತ್ತೇನೆ” ಎಂದು ಘೋಷಿಸಿದರು.
2022ರ ಮಾರ್ಚ್ ೧೧ರಂದು ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಜಾಗತಿಕವಾಗಿ ೩೪೦ ಕೋಟಿ ರೂಪಾಯಿಗಿಂತ ಅಧಿಕ ಹಣ ಗಳಿಸಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ.
ಇದನ್ನೂ ಓದಿ: Vivek Agnihotri | ವಿವೇಕ್ ಅಗ್ನಿಹೋತ್ರಿಯ ʻದಿ ವ್ಯಾಕ್ಸಿನ್ ವಾರ್ʼ ಸಿನಿಮಾ ಸೆಟ್‌ನಲ್ಲಿ ಅನುಪಮ್ ಖೇರ್