Site icon Vistara News

The Kashmir Files | ಕಾಶ್ಮೀರ್‌ ಫೈಲ್ಸ್‌ಗೆ ನಿರ್ಮಾಪಕನ ಅವಹೇಳನ: ಭಾರತೀಯರ ಕ್ಷಮೆಯಾಚಿಸಿದ ಇಸ್ರೇಲ್‌ ರಾಯಭಾರಿ

naor gilan

ನವ ದೆಹಲಿ: ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು (The Kashmir Files) ಅಶ್ಲೀಲ ಹಾಗೂ ಅಪಪ್ರಚಾರದ ಅಂಶಗಳು ತುಂಬಿಕೊಂಡಿರುವ ಚಿತ್ರವೆಂದು ಟೀಕಿಸಿರುವ ಐಎಫ್‌ಎಫ್‌ಐ ಜ್ಯೂರಿ ಮುಖ್ಯಸ್ಥ ಹಾಗೂ ಇಸ್ರೇಲಿ ಚಿತ್ರ ನಿರ್ಮಾಪಕ ನಡಾವ್‌ ಲ್ಯಾಪಿಡ್‌ ಅವರನ್ನು ಭಾರತಕ್ಕೆ ಇಸ್ರೇಲ್ ರಾಯಭಾರಿಯಾಗಿರುವ ನಯೋರ್‌ ಗಿಲಾನ್‌ ಖಂಡಿಸಿದ್ದಾರೆ.

ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಅಶ್ಲೀಲ ಎಂದು ಟೀಕಿಸಿರುವ ನಡಾವ್‌ ಲ್ಯಾಪಿಡ್

ನಡಾವ್‌ ಲ್ಯಾಪಿಡ್‌ ಅವರಿಗೆ ಬಹಿರಂಗಪತ್ರ ಬರೆದಿರುವ ನಯೋರ್‌ ಗಿಲಾನ್‌, ಕಾಶ್ಮೀರ್‌ ಫೈಲ್ಸ್‌ ಸಿನಿಮಾವನ್ನು ಅವಹೇಳನಕಾರಿಯಾಗಿ ಟೀಕಿಸಿರುವುದಕ್ಕಾಗಿ ನಿಮಗೆ ನಾಚಿಕೆಯಾಗಬೇಕು ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ರವನ್ನು ಅವರು ಟ್ವೀಟ್‌ ಮಾಡಿದ್ದಾರೆ.

ಈ ಪತ್ರವನ್ನು ಹೀಬ್ರೂ ಭಾಷೆಯಲ್ಲಿ ಬರೆದಿಲ್ಲ, ಯಾಕೆಂದರೆ ನಮ್ಮ ಭಾರತೀಯ ಸೋದರ ಮತ್ತು ಸೋದರಿಯರು ಕೂಡ ಪತ್ರವನ್ನು ಓದಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು. ಪತ್ರ ಸ್ವಲ್ಪ ದೀರ್ಘವಿರುವುದರಿಂದ ಒಟ್ಟಾರೆ ಸಾರಾಂಶವನ್ನು ಮೊದಲು ಬರೆಯುತ್ತಿದ್ದೇನೆ- ನಾಚಿಕೆ ಆಗಬೇಕು ನಿಮಗೆ.. (YOU SHOULD BE ASHAMED) ಎಂದು ನಯೋರ್‌ ಖಂಡಿಸಿದ್ದಾರೆ.

ಅತಿಥಿಗಳನ್ನು ದೇವರೆಂದು ಗೌರವಿಸುವ ಸಂಸ್ಕೃತಿ ಭಾರತೀಯರದ್ದು: ಮನೆಗೆ ಬರುವ ಅತಿಥಿಗಳನ್ನು ದೇವರೆಂದು ಗೌರವಿಸಿ ಸತ್ಕರಿಸುವ ಸಂಸ್ಕೃತಿ ಭಾರತೀಯರದ್ದು. ಐಎಫ್‌ಎಫ್‌ಐ ಜ್ಯೂರಿ ಮುಖ್ಯಸ್ಥರಾಗಿ ನಿಮಗೆ ಭಾರತ ಆಹ್ವಾನಿಸಿತ್ತು. ಹಾಗೂ ವಿಶ್ವಾಸದಿಂದ ಆತಿಥ್ಯವನ್ನೂ ನೀಡಿತ್ತು. ಆದರೆ ನೀವು ಈ ಆಹ್ವಾನ ಮತ್ತು ಸತ್ಕಾರಕ್ಕೆ ಅಪಚಾರ ಎಸಗಿದ್ದೀರಿ. ಭಾರತ ಮತ್ತು ಇಸ್ರೇಲ್‌ ಮೈತ್ರಿಯ ದ್ಯೋತಕವಾಗಿ ನಿಮ್ಮನ್ನು ಭಾರತೀಯರು ಆದರದಿಂದ ಕರೆದಿರಬಹುದು. ಆದರೆ ಅದಕ್ಕೆ ತಕ್ಕಂತೆ ನಡೆದುಕೊಂಡಿಲ್ಲ.

ನಾನು ಕ್ಷಮೆ ಯಾಚಿಸುವೆ

ಭಾರತ ಮತ್ತು ಇಸ್ರೇಲ್‌ ನಡುವೆ ಗಾಢವಾದ ಮೈತ್ರಿಯ ಬೆಸುಗೆ ಇದೆ. ನಿಮ್ಮ ಹೇಳಿಕೆ ಇದಕ್ಕೆ ಯಾವುದೇ ಚ್ಯುತಿಯಾಗದು ಎಂದು ನಾನು ಭಾವಿಸಿರುವೆ. ಆದರೆ ಒಬ್ಬ ಮನುಷ್ಯನಾಗಿ ನನಗೇ ನಾಚಿಕೆಯಾಗುತ್ತಿದೆ. ಅವರ ಸ್ನೇಹಕ್ಕೆ ಪ್ರತಿಯಾಗಿ ನೀವು ನಡೆದುಕೊಂಡಿರುವ ಕೆಟ್ಟ ರೀತಿಗೆ ಪ್ರತಿಯಾಗಿ ನಾನು ಭಾರತೀಯರ ಹಾಗೂ ಅತಿಥ್ಯ ನೀಡಿದವರ ಬಳಿ ಕ್ಷಮೆ ಯಾಚಿಸುತ್ತಿದ್ದೇನೆ. ನೀವು ಇಂಥ ಹೇಳಿಕೆ ನೀಡಿದ ಬಳಿಕ ಇಸ್ರೇಲಿಗೆ ಹಿಂತಿರುಗಬಹುದು. ನೀವು ದಿಟ್ಟ ವ್ಯಕ್ತಿ ಹಾಗೂ ದಿಟ್ಟತನದ ಹೇಳಿಕೆ ನೀಡಿರುವುದಾಗಿ ಭ್ರಮಿಸಬಹುದು. ಆದರೆ ನಾವು ಇಲ್ಲಿ ಇಸ್ರೇಲನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದನ್ನು ಮರೆಯಬಾರದು. ನಿಮಗೆ ಎಲ್ಲವನ್ನೂ ಟೀಕಿಸುವ ಸ್ವಾತಂತ್ರ್ಯ ಇದೆ. ಆದರೆ ಇತರ ದೇಶದ ಮೇಲಿನ ನಿಮ್ಮ ಅಸಹನೆಯನ್ನು ಈ ರೀತಿ ಪ್ರದರ್ಶಿಸುವ ಅಗತ್ಯ ಇರಲಿಲ್ಲ. ಇಂಥ ಹೇಳಿಕೆ ನೀಡಲು ನಿಮ್ಮ ಬಳಿ ವಸ್ತುನಿಷ್ಠ ಆಧಾರ ಇರಬಹುದು ಎಂಬ ಖಾತರಿಯೂ ನನಗಿಲ್ಲ ಎಂದು ನಡಾವ್‌ ಲಿಪಿಡ್‌ ಅವರನ್ನು ಇಸ್ರೇಲ್‌ ರಾಯಭಾರಿ ನಯೋರ್‌ ಗಿಲಾನ್‌ ಖಂಡಿಸಿದ್ದಾರೆ.

ಇದನ್ನೂ ಓದಿ: The Kashmir Files | ಕಾಶ್ಮೀರ್‌ ಫೈಲ್ಸ್‌ ಅಶ್ಲೀಲ, ಅಪಪ್ರಚಾರದ ಚಿತ್ರ ಎಂದ ಐಎಫ್‌ಎಫ್‌ಐ ಜ್ಯೂರಿ, ಇಸ್ರೇಲಿ ಚಿತ್ರ ನಿರ್ಮಾಪಕ ಲ್ಯಾಪಿಡ್

Exit mobile version