Site icon Vistara News

The Kashmir Files | ಕಾಶ್ಮೀರ್‌ ಫೈಲ್ಸ್‌ ಅಶ್ಲೀಲ, ಅಪಪ್ರಚಾರದ ಚಿತ್ರ ಎಂದ ಐಎಫ್‌ಎಫ್‌ಐ ಜ್ಯೂರಿ, ಇಸ್ರೇಲಿ ಚಿತ್ರ ನಿರ್ಮಾಪಕ ಲ್ಯಾಪಿಡ್

Nadav Lapid on Kashmir Files

ಗೋವಾ: ಗೋವಾದಲ್ಲಿ ನಡೆದ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದಲ್ಲಿ ಐಎಫ್‌ಎಫ್‌ಐನ ಜ್ಯೂರಿ ಮುಖ್ಯಸ್ಥ, ಇಸ್ರೇಲಿ ಚಿತ್ರ ನಿರ್ಮಾಪಕ ನಾಡವ್‌ ಲ್ಯಾಪಿಡ್‌ ಅವರು, ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ‌ ಕಾಶ್ಮೀರ್‌ ಫೈಲ್ಸ್‌ (The Kashmir Files ) ಒಂದು ಅಶ್ಲೀಲ ಚಿತ್ರ ಹಾಗೂ ಅಪಪ್ರಚಾರವನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾ ಎಂದು ಟೀಕಿಸಿದ್ದಾರೆ. ಇದು ಈಗ ವಿವಾದದ ಕಿಡಿ ಹೊತ್ತಿಸಿದೆ.

ಇಸ್ರೇಲಿ ಚಿತ್ರ ನಿರ್ಮಾಪಕ ನಡಾವ್‌ ಲ್ಯಾಪಿಡ್‌ ಅವರು ಐಎಫ್‌ಎಫ್‌ಐ ಜ್ಯೂರಿಗಳ ತಂಡದ ಮುಖ್ಯಸ್ಥರಾಗಿ ನೀಡಿರುವ ಈ ಹೇಳಿಕೆ ಕೋಲಾಹಲವೆಬ್ಬಿಸಿದೆ.

ನಾಡವ್‌ ಲ್ಯಾಪಿಡ್‌ ಆರೋಪವೇನು?

ಚಲನಚಿತ್ರೋತ್ಸವದಲ್ಲಿ 15ನೇ ಚಿತ್ರವಾಗಿದ್ದ ಕಾಶ್ಮೀರ್‌ ಫೈಲ್ಸ್‌ ನೋಡಿದಾಗ ನಮಗೆ ಆಘಾತವಾಯಿತು. ಇದು ಒಂದು ಅಶ್ಲೀಲ ಸಿನಿಮಾ. ಇದು ಅಪಪ್ರಚಾರದ ಅಂಶಗಳನ್ನು ಒಳಗೊಂಡಿದೆ. ಇಂಥ ಕಲಾತ್ಮಕ, ಸ್ಪರ್ಧಾತ್ಮಕ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲು ಸೂಕ್ತವಲ್ಲದ ಸಿನಿಮಾ. ನಾನು ನಿರ್ದಾಕ್ಷಿಣ್ಯವಾಗಿ, ಬಹಿರಂಗವಾಗಿ ನನ್ನ ಅಭಿಪ್ರಾಯವನ್ನು ಈ ವೇದಿಕೆಯಿಂದ ಹೇಳಲು ಬಯಸುತ್ತೇನೆ. ಕಲೆಯ ಹಿತಾಸಕ್ತಿ ದೃಷ್ಟಿಯಿಂದ ಇಂಥ ಚಲನಚಿತ್ರೋತ್ಸವದಲ್ಲಿ ಮುಕ್ತ ಹಾಗೂ ಕಟು ವಿಮರ್ಶೆಯ ಅಗತ್ಯತೆ ಇದೆ ಎಂದು ನಾಡವ್‌ ಲ್ಯಾಪಿಡ್‌ ವಿವಾದದ ಕಿಡಿ ಹೊತ್ತಿಸಿದರು.

ವಿವೇಕ್‌ ಅಗ್ನಿಹೋತ್ರಿ ಪ್ರತಿಕ್ರಿಯೆ ಏನು?

ಕಾಶ್ಮೀರ್‌ ಫೈಲ್ಸ್‌ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು, ಸತ್ಯ ಅತ್ಯಂತ ಅಪಾಯಕಾರಿ ವಿಷಯವಾಗುತ್ತದೆ. ಇದು ಜನ ಸುಳ್ಳು ಹೇಳುವಂತೆ ಮಾಡಬಲ್ಲುದು ಎಂದು ಟ್ವೀಟ್‌ ಮಾಡಿದ್ದಾರೆ.

ಅಂತರ ಕಾಯ್ದುಕೊಂಡ ಮಂಡಳಿ: ಹೀಗಿದ್ದರೂ, ಐಎಫ್‌ಎಫ್‌ಐನ ಜ್ಯೂರಿ ಮುಖ್ಯಸ್ಥ ನಡಾವ್‌ ಲ್ಯಾಪಿಡ್‌ ಅವರ ಹೇಳಿಕೆ ಸಂಪೂರ್ಣ ವೈಯಕ್ತಿಕ. ಇದಕ್ಕೂ ಜ್ಯೂರಿ ಮಂಡಳಿಗೂ ಸಂಬಂಧ ಇಲ್ಲ ಎಂದು ಮಂಡಳಿ ತಿಳಿಸಿದೆ.

ಅನುಪಮ್‌ ಖೇರ್‌ ಏನೆಂದರು?

ಚಲನಚಿತ್ರೋತ್ಸವದಲ್ಲಿ ಕಾಶ್ಮೀರ್‌ ಫೈಲ್ಸ್‌ ವಿರುದ್ಧದ ಟೀಕೆ ಪೂರ್ವ ನಿಯೋಜಿತವೆಂಬಂತೆ ಕಾಣಿಸುತ್ತಿದೆ. ಕಾಶ್ಮೀರ ಪಂಡಿತರ ನೋವು- ಕಷ್ಟ ಸಂಕಷ್ಟಗಳ ಬಗ್ಗೆ ಲ್ಯಾಪಿಡ್‌ ಅವರು ಸಂವೇದನಾ ರಹಿತವಾದ ಹೇಳಿಕೆ ನೀಡಿದ್ದಾರೆ. ಟೂಲ್‌ ಕಿಟ್‌ ಗ್ಯಾಂಗ್‌ ಮತ್ತೆ ಸಕ್ರಿಯವಾದಂತೆ ಕಾಣಿಸುತ್ತಿದೆ ಎಂದು ಹಿರಿಯ ನಟ ಅನುಪಮ್‌ ಖೇರ್‌ ಹೇಳಿದ್ದಾರೆ.

ಸಾಮೂಹಿಕ ನರಮೇಧದ ದುರಂತಗಳ ಬಗ್ಗೆ ಚೆನ್ನಾಗಿ ಬಲ್ಲ, ಯೆಹೂದಿ ಸಮುದಾಯದಿಂದ ಬಂದಿರುವ ವ್ಯಕ್ತಿಯೊಬ್ಬ, ಕಾಶ್ಮೀರ ಪಂಡಿತದ ನರಮೇಧದ ಕಥಾನಕವನ್ನು ಒಳಗೊಂಡಿರುವ ಸಿನಿಮಾ ಬಗ್ಗೆ ಇಂಥ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅನುಪಮ್‌ ಖೇರ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಶ್ಮೀರ್ ಫೈಲ್ಸ್‌ ಚಿತ್ರವನ್ನು ನವೆಂಬರ್‌ 22ರಂದು ಐಎಫ್‌ಎಫ್‌ಐನಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಗಿತ್ತು. 1990ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ, ಸಾಮೂಹಿಕ ನರಮೇಧ, ವಲಸೆಯ ಕಥನವನ್ನು ಸಿನಿಮಾ ಬಿಂಬಿಸಿದೆ.

Exit mobile version