ನವದೆಹಲಿ: ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕರಾಳ ರೂಪ ಬಯಲು ಮಾಡುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI)ದ ಜ್ಯೂರಿ, ಇಸ್ರೇಲ್ ಸಿನಿಮಾ ನಿರ್ದೇಶಕ ನಡಾವ್ ಲ್ಯಾಪಿಡ್ (Nadav Lapid Apology) ಅವರು ಕ್ಷಮೆಯಾಚಿಸಿದ್ದಾರೆ.
“ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ. ತೊಂದರೆ ಅನುಭವಿಸಿದ ಕಾಶ್ಮೀರಿ ಪಂಡಿತರು, ಅವರ ಸಂಬಂಧಿಕರ ಮನಸ್ಸನ್ನು ನೋಯಿಸುವ ಇರಾದೆ ಇರಲೇ ಇಲ್ಲ. ಆದರೂ, ನನ್ನ ಮಾತಿನಿಂದ ಯಾರಿಗಾದರೂ ನೋವುಂಟಾದರೆ, ಅವರ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.
ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿ ಕಾಶ್ಮೀರ್ ಫೈಲ್ಸ್ ಕುರಿತು ಲ್ಯಾಪಿಡ್ ಮಾತನಾಡಿದ್ದರು. “ಇದೊಂದು ಕೀಳು ಅಭಿರುಚಿಯ ಸಿನಿಮಾ ಆಗಿದೆ. ಹಿಂದರ ಹಿಂದೆ ಪ್ರಪಗಂಡ ಕೂಡ ಇದೆ” ಎಂದಿದ್ದರು. ನಡಾವ್ ಲ್ಯಾಪಿಡ್ ಹೇಳಿಕೆ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ನಿರ್ದೇಶಕ ಅಗ್ನಿಹೋತ್ರಿ ಪ್ರತಿಕ್ರಿಯೆ ಏನು?
ನಡಾವ್ ಲ್ಯಾಪಿಡ್ ಕ್ಷಮೆಯಾಚನೆ ಕುರಿತು ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯಿಸಿದ್ದು, “ನಾನು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ” ಎಂದಿದ್ದಾರೆ. “ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಜನ ಮೆಚ್ಚಿದ್ದಾರೆ. ಈಗಲೂ ಎಲ್ಲಿಯೇ ಹೋದರೂ ಸಿನಿಮಾ ಕುರಿತು ಒಳ್ಳೆಯ ಮಾತನ್ನಾಡುತ್ತಾರೆ. ಜನರ ಪ್ರೀತಿ, ವಿಶ್ವಾಸ ಹೀಗಿರುವಾಗ ಬೇರೆಯವರು ಏನು ಹೇಳಿದರು ಎಂಬುದು ಮುಖ್ಯವಲ್ಲ” ಎಂದಿದ್ದಾರೆ. ಈಗಾಗಲೇ ಅಗ್ನಿಹೋತ್ರಿ ಅವರು, ದಿ ಕಾಶ್ಮೀರ್ ಫೈಲ್ಸ್ ಪಾರ್ಟ್ ೨ ಘೋಷಿಸಿದ್ದಾರೆ.
ಇದನ್ನೂ ಓದಿ | The Kashmir Files | ಆಕ್ರೋಶದ ಬೆನ್ನಲ್ಲೇ ಲ್ಯಾಪಿಡ್ ಯುಟರ್ನ್, ದಿ ಕಾಶ್ಮೀರ್ ಫೈಲ್ಸ್ ‘ಅದ್ಭುತ ಸಿನಿಮಾ’ ಎಂದು ಬಣ್ಣನೆ