Site icon Vistara News

The Kerala Story: ದಿ ಕೇರಳ ಸ್ಟೋರಿ ಸಿನಿಮಾ ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತ; ಎಲ್ಲರೂ ನೋಡಿ ಎಂದ ಸಿಎಂ ಚೌಹಾಣ್​

The Kerala Story

#image_title

ಭೋಪಾಲ್​: ಕೇರಳದ ಸಾವಿರಾರು ಹಿಂದು-ಕ್ರಿಶ್ಚಿಯನ್​ ಯುವತಿಯರನ್ನು ಉದ್ಯೋಗದ ಆಮಿಷವೊಡ್ಡಿ ಅಫ್ಘಾನಿಸ್ತಾನ-ಸಿರಿಯಾಕ್ಕೆ ಕರೆದೊಯ್ದು ಮತಾಂತರ ಮಾಡಿ, ಅವರನ್ನು ಐಸಿಸ್​ ಭಯೋತ್ಪಾದಕ ಸಂಘಟನೆಗೆ ಸೇರಿಸುವ ಕಥಾ ಹಂದರವನ್ನು ಒಳಗೊಂಡ ದಿ ಕೇರಳ ಸ್ಟೋರಿ (The Kerala Story) ಚಲನಚಿತ್ರ ಮೇ 5ರಂದು ಬಿಡುಗಡೆಯಾಗಿದೆ. ಈ ಚಿತ್ರ ಟ್ರೇಲರ್​ ಬಿಡುಗಡೆಯಾಗುತ್ತಿದ್ದಂತೆಯೇ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳು ಮತ್ತು ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ದಿ ಕೇರಳ ಸ್ಟೋರಿ ಚಿತ್ರ ಬಿಡುಗಡೆಗೆ ಅವಕಾಶ ಕೊಡಬಾರದು. ಬ್ಯಾನ್ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟ್​ಗಳಿಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಎಲ್ಲ ಅರ್ಜಿಗಳೂ ತಿರಸ್ಕೃತಗೊಂಡು, ಮೇ 5ರಂದು ದಿ ಕೇರಳ ಸ್ಟೋರಿ ಯಾವುದೇ ಅಡೆತಡೆಯಿಲ್ಲದೆ ಬಿಡುಗಡೆಯಾಗಿದೆ. ಇನ್ನು ಚಿತ್ರ ಬಿಡುಗಡೆಗೂ ಮುನ್ನವೇ ಸೆನ್ಸಾರ್ ಬೋರ್ಡ್​ ಈ ಸಿನಿಮಾದ ಸುಮಾರು 10 ದೃಶ್ಯಗಳಿಗೆ ಕತ್ತರಿಯನ್ನೂ ಹಾಕಿದೆ.

ದೇಶಾದ್ಯಂತ ಥಿಯೇಟರ್​ಗಳಲ್ಲಿ ಬಿಡುಗಡೆಗೊಂಡಿರುವ ದಿ ಕೇರಳ ಸ್ಟೋರಿ ಸಿನಿಮಾ ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತವಾಗಿದೆ. ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಅವರು ದಿ ಕೇರಳ ಸ್ಟೋರಿ ಸಿನಿಮಾವನ್ನು ಶ್ಲಾಘಿಸಿದ್ದಾರೆ. ಲವ್​ ಜಿಹಾದ್, ಮತಾಂತರ ಮತ್ತು ಭಯೋತ್ಪಾದನೆಯ ಭಯಾನಕತೆಯನ್ನು ಬಿಚ್ಚಿಟ್ಟ ಈ ಸಿನಿಮಾವನ್ನು ರಾಜ್ಯದಲ್ಲಿ ತೆರಿಗೆ ಮುಕ್ತ ಮಾಡಲಾಗುವುದು’ ಎಂದು ಹೇಳಿದ್ದಾರೆ. ಈ ಮೂಲಕ ಅವರು ಹೆಚ್ಚೆಚ್ಚು ಜನರು ಈ ಸಿನಿಮಾ ನೋಡಲು ಪ್ರೋತ್ಸಾಹಿಸಿದ್ದಾರೆ. ಸಿನಿಮಾವನ್ನು ತೆರಿಗೆ ಮುಕ್ತ ಮಾಡುವುದರಿಂದ ಸಹಜವಾಗಿ ಅದರ ಟಿಕೆಟ್ ಬೆಲೆ ಕಡಿಮೆಯಾಗುತ್ತದೆ. ಜನರಿಗೆ ಅನುಕೂಲವಾಗುತ್ತದೆ.

ಇದನ್ನೂ ಓದಿ: The Kerala Story: ʻದಿ ಕಾಶ್ಮೀರ್ ಫೈಲ್ಸ್‌ʼ ದಾಖಲೆಯನ್ನು ಮುರಿಯಲಿದೆಯೇ ʻದಿ ಕೇರಳ ಸ್ಟೋರಿʼ: ತಜ್ಞರು ಹೇಳೋದೇನು?

‘ಲವ್​ ಜಿಹಾದ್​ಗೆ ಒಳಗಾದ ಹೆಣ್ಣು ಮಕ್ಕಳ ಜೀವನ ಹೇಗೆ ನಾಶವಾಗುತ್ತದೆ ಎಂಬುದನ್ನು ದಿ ಕೇರಳ ಸ್ಟೋರಿಯಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಭಯೋತ್ಪಾದನೆಯ ವಿವಿಧ ಆಯಾಮಗಳನ್ನು ತೋರಿಸಲಾಗಿದೆ. ಮತಾಂತರದ ವಿರುದ್ಧ ನಾವು ಈಗಾಗಲೇ ಕಾನೂನು ಜಾರಿ ಮಾಡಿದ್ದೇವೆ. ಅಂತೆಯೇ ಈ ಸಿನಿಮಾದಲ್ಲಿ ಕೂಡ ಮತಾಂತರ, ಲವ್ ಜಿಹಾದ್​ ಬಗ್ಗೆ ಅರಿವು ಮೂಡಿಸಲಾಗಿದೆ. ಪ್ರತಿಯೊಬ್ಬರೂ ಈ ಸಿನಿಮಾ ನೋಡುವಂತಾಗಬೇಕು ಎಂಬ ಕಾರಣಕ್ಕೇ ಮಧ್ಯಪ್ರದೇಶದಲ್ಲಿ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ’ ಎಂದು ಶಿವರಾಜ್ ಸಿಂಗ್ ಚೌಹಾಣ್​ ಹೇಳಿದ್ದಾರೆ.

ದಿ ಕೇರಳ ಸ್ಟೋರಿ ಸಿನಿಮಾವನ್ನು ಸುದೀಪ್ತೋ ಸೇನ್​ ನಿರ್ದೇಶನ ಮಾಡಿದ್ದು, ಆದಾ ಶರ್ಮಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದರ ಟ್ರೇಲರ್​ನಲ್ಲಿ ಕೇರಳದ ಸುಮಾರು 32 ಸಾವಿರ ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದು ಬಿಂಬಿಸಲಾಗಿತ್ತು. ಇದು ಸುಳ್ಳು ಮಾಹಿತಿ ಎಂದು ಅನೇಕರು ಕಿಡಿಕಾರಿದ್ದರು. ಹಾಗಾಗಿ ಅದರ ನಿಷೇಧಕ್ಕೆ ಆಗ್ರಹಿಸಲಾಗಿತ್ತು. ಆದರೆ ಯಾವುದೇ ಕೋರ್ಟ್​ಗಳೂ ತಡೆ ಕೊಟ್ಟಿಲ್ಲ. ಈ ಮಧ್ಯೆ 32 ಸಾವಿರ ಹುಡುಗಿಯರು ಇಸ್ಲಾಮ್​ಗೆ ಮತಾಂತರಗೊಂಡಿದ್ದಾರೆ ಎಂಬ ಸನ್ನಿವೇಶವನ್ನು ಚಿತ್ರದಿಂದ ತೆಗೆಯುವುದಾಗಿ ಚಿತ್ರತಂಡ ತಿಳಿಸಿದೆ.

Exit mobile version