Site icon Vistara News

Hanuman Jayanti: ಏ.6ಕ್ಕೆ ಹನುಮಾನ್​ ಜಯಂತಿ; ಶಾಂತಿಯುತ ಆಚರಣೆ ಇರಲಿ ಎಂದ ಕೇಂದ್ರ ಗೃಹ ಸಚಿವಾಲಯ

The Ministry of Home Affairs issued an advisory ahead of Hanuman Jayanti

#image_title

ಶ್ರೀರಾಮನವಮಿ ಹಬ್ಬದ ದಿನ ದೇಶದಲ್ಲಿ ಬಿಹಾರ, ಮಹಾರಾಷ್ಟ್ರ, ತೆಲಂಗಾಣ ಮತ್ತು ಇನ್ನಿತರ ಹಲವು ಭಾಗಗಳಲ್ಲಿ ಕೋಮುಗಲಭೆ ನಡೆದಿದೆ. ಹಿಂಸಾಚಾರ ಮಿತಿಮೀರಿ, ಬೆಂಕಿ ಹೊತ್ತಿ ಉರಿದಿದೆ. ಇದೀಗ ಏಪ್ರಿಲ್​ 6ರಂದು ದೇಶಾದ್ಯಂತ ಅನೇಕ ಕಡೆ ಹನುಮಾನ್​ ಜಯಂತಿ (Hanuman Jayanti) ಆಚರಣೆ ನಡೆಯಲಿದ್ದು, ತನ್ನಿಮಿತ್ತ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನಾ ಪತ್ರ ಬಿಡುಗಡೆ ಮಾಡಿದೆ. ‘ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಹಬ್ಬ ಆಚರಿಸುವಂತೆ ಜನಸಾಮಾನ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಹಾಗೇ, ಸಮಾಜದಲ್ಲಿ ಕೋಮು ಸೌಹಾರ್ದತೆ ಕದಡಬಹುದಾದ ಯಾವುದೇ ಘಟನೆಗಳು ನಡೆಯದಂತೆ ಸರ್ಕಾರಗಳು ತೀವ್ರ ನಿಗಾ ವಹಿಸಬೇಕು’ ಎಂದು ಈ ಅಡ್ವೈಸರಿಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ಹಾಗೇ, ಈ ಸಲಹಾ ಪತ್ರವನ್ನು ಕೇಂದ್ರ ಗೃಹ ಇಲಾಖೆ ಟ್ವೀಟ್​ ಮಾಡಿಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಶ್ರೀರಾಮನವಮಿ ಹಬ್ಬದ ದಿನ, ಹನುಮಾನ್​ ಜಯಂತಿ ಆಚರಣೆಗಳ ಸಂದರ್ಭದಲ್ಲಿ ಕೋಮು ಹಿಂಸಾಚಾರ ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಈ ವರ್ಷವೂ ಮಾ.30ರಂದು ಶ್ರೀರಾಮನವಮಿ ಹಬ್ಬದ ದಿನ ಗಲಭೆ ಅತಿಯಾಗಿ, ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಇನ್ನು ದೆಹಲಿಯ ಜಹಂಗೀರ್​​ಪುರಿ ಪ್ರದೇಶದಲ್ಲಿ ಕಳೆದ ವರ್ಷ ಹನುಮಾನ್​ ಜಯಂತಿ ಹಬ್ಬದ ದಿನ ಕೋಮು ಗಲಭೆ ಉಂಟಾಗಿ, ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ 8 ಪೊಲೀಸರು ಗಾಯಗೊಂಡಿದ್ದರು. ಸ್ಥಳೀಯ ನಾಗರಿಕನೊಬ್ಬನಿಗೂ ಗಾಯವಾಗಿತ್ತು. ಹೀಗಾಗಿ ಈ ವರ್ಷ ಜಹಂಗೀರ್​​ಪುರಿಯಲ್ಲಿ ಪೊಲೀಸರು ಇವತ್ತಿನಿಂದಲೇ ಕಟ್ಟೆಚ್ಚರ ವಹಿಸಿದ್ದಾರೆ. ಇಲ್ಲಿ ನಾಳೆ (ಏ.6)ಹನುಮಾನ್​ ಜಯಂತಿ ನಿಮಿತ್ತ ಯಾವುದೇ ರೀತಿಯ ಮೆರವಣಿಗೆ ನಡೆಸಬಾರದು ಎಂದು ವಿಶ್ವ ಹಿಂದು ಪರಿಷತ್​ ಮತ್ತು ಇತರ ಹಿಂದು ಸಂಘಟನೆಗಳಿಗೆ ದೆಹಲಿ ಪೊಲೀಸರು ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ. ಹಾಗೇ, ಅವರು ಇಂದು ಇಡೀ ಏರಿಯಾದಲ್ಲಿ ಪಥ ಸಂಚಲನ ನಡೆಸಿ, ಅಲ್ಲಿನ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಹಿಂಸಾಚಾರ; ಹೂಗ್ಲಿಯಲ್ಲಿ ಕಲ್ಲು ತೂರಾಟ, ವಿಳಂಬವಾದ ರೈಲುಗಳ ಸಂಚಾರ

ಬಿಹಾರದ ನಳಂದಾ, ಸಾಸಾರಾಮ್​, ಪಶ್ಚಿಮ ಬಂಗಾಳದ ಹೌರಾ, ಹೂಗ್ಲಿಯಲ್ಲಿ ಮಾ.30ರ ಶ್ರೀರಾಮನವಮಿ ದಿನದಂದು ಕಲ್ಲುತೂರಾಟ ನಡೆದಿದೆ. ಬಿಜೆಪಿಯಿಂದ ಆಯೋಜಿಸಲಾಗಿದ್ದ ಶ್ರೀರಾಮನವಮಿ ಮೆರವಣಿಗೆಯ ಮೇಲೆ ಅನ್ಯ ಕೋಮಿನ ಜನರು ದಾಳಿ ನಡೆಸಿದ್ದರು. ಹೀಗಾಗಿ ನಾಳೆ ಹನುಮಜಯಂತಿ ನಿಮಿತ್ತ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಪಶ್ಚಿಮ ಬಂಗಾಳದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರಿಗೆ ನೆರವಾಗಲು ಕೇಂದ್ರ ಸಶಸ್ತ್ರ ಪಡೆಗಳನ್ನು ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೋಲ್ಕತ್ತ ಹೈಕೋರ್ಟ್ ಹೇಳಿದೆ. ಇದೇ ಸೂಚನೆಯನ್ನು ಕೇಂದ್ರ ಸರ್ಕಾರಕ್ಕೆ ಕೂಡ ನೀಡಿದೆ.

Exit mobile version