Site icon Vistara News

Parrot witness case: ಕೊಲೆಗಾರರ ಹೆಸರು ಹೇಳಿದ ಗಿಳಿ! ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

The parrot said the name of the killers!

ಆಗ್ರಾ, ಉತ್ತರ ಪ್ರದೇಶ: ಸಾಕಿದ ಗಿಳಿಯೊಂದು ಹೇಳಿದ ಸಾಕ್ಷ್ಯದ ಪರಿಣಾಮ 9 ವರ್ಷಗಳ ಹಿಂದಿನ ಕೊಲೆ ಪ್ರಕರಣವನ್ನು ಉತ್ತರ ಪ್ರದೇಶದ ಪೊಲೀಸರು ಭೇದಿಸಿದ್ದಾರೆ. ಅಷ್ಟೇ ಅಲ್ಲದೇ, ಕೊಲೆ ಆರೋಪಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಮಹಿಳೆಯೊಬ್ಬಳನ್ನು ಕೊಂದು, ಅವರ ಮನೆ ದೋಚಿದ್ದು ಮಾತ್ರವಲ್ಲದೇ ಮನೆಯಲ್ಲಿದ್ದ ಸಾಕು ನಾಯಿಯನ್ನು ಇಬ್ಬರು ಕೊಂದು ಎಸ್ಕೇಪ್ ಆಗಿದ್ದರು. ಒಂಭತ್ತು ವರ್ಷಗಳ ಹಿಂದೆ ನಡೆದ ಈ ಪ್ರಕರಣವು ಈ ಅಂತ್ಯ ಕಂಡಿದೆ(Parrot witness case:).

ಏನಿದು ಪ್ರಕರಣ? ಗಿಳಿ ಹೇಳಿದ ಹೆಸರು ಯಾವುದು?

ಆಗ್ರಾದಲ್ಲಿ 9 ವರ್ಷಗಳ ಹಿಂದೆ ಅಂದರೆ, 2014 ಫೆಬ್ರವರಿ 20ರಂದು ವಿಜಯ ಶರ್ಮಾ ಎಂಬುವವರು ತಮ್ಮ ಮಕ್ಕಳೊಂದಿಗೆ ಮದುವೆಗೆ ಹೋಗಿದ್ದರು. ರಾತ್ರಿ ವಾಪಸ್ ಮನೆಗೆ ಬರುವಷ್ಟರಲ್ಲಿ ಅವರ ಮನೆಯನ್ನು ದರೋಡೆ ಮಾಡಲಾಗಿತ್ತು. ಅಲ್ಲದೇ, ಹೆಂಡತಿ ನೀಲಮ್ ಮತ್ತು ಸಾಕು ನಾಯಿಯನ್ನು ಕೊಲ್ಲಲಾಗಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸಿದರೂ ಯಾವುದೇ ಕುರುಹುಗಳು ದೊರೆತಿರಲಿಲ್ಲ. ತನಿಖೆ ಮುಂದುವರಿಸುವುದು ಕಷ್ಟವಾಗಿತ್ತು.

ಮೃತ ನೀಲಮ್ ಅವರು ನಾಯಿ ಜತೆಗೆ ಮಿಥುರಾಜ್ ಎಂಬ ಗಿಳಿಯನ್ನು ಸಾಕಿದ್ದರು. ನೀಲಮ್ ಕೊಲೆಯ ಬಳಿಕ ಈ ಗಿಳಿ ನಿಸ್ತೇಜವಾಗಿತ್ತು. ಅನ್ನ, ನೀರು ಎರಡನ್ನೂ ತ್ಯಜಿಸಿತ್ತು. ಬಹುಶಃ ಗಿಳಿಗೆ ಕೊಲೆಗಾರರು ಯಾರೆಂಬದು ಗೊತ್ತಿದೆ. ಹಾಗಾಗಿ, ಗಿಳಿ ನಿಸ್ತೇಜವಾಗುತ್ತಿದೆ ಎಂದು ನೀಲಮ್ ಪತಿ ವಿಜಯ ಶರ್ಮಾ ಅವರಿಗೆ ಅನುಮಾನ ಬರತೊಡಗಿತ್ತು. ಕೂಡಲೇ ಅವರು ಗಿಳಿಯ ಮುಂದೆ ಅನುಮಾನಾಸ್ಪದ ವ್ಯಕ್ತಿಗಳ ಹೆಸರು ಹೇಳಲಾರಂಭಿಸಿದರು. ಹೀಗೆ ವ್ಯಕ್ತಿಗಳ ಹೆಸರು ಹೇಳುತ್ತಿದ್ದಾಗ, ಅವರು ಆಶು ಎಂದು ಹೇಳುತ್ತಿದ್ದಂತೆ ಗಿಳಿಯ ವರ್ತನೆಯ ಬದಲಾವಣೆಯಾಯಿತು. ಆಶು ಆಶು ಎಂದು ಕೂಗಲಾರಂಭಿಸಿತು. ಆಶು ಅಲಿಯಾಸ್ ಅಶುತೋಷ್ ಬೇರೆ ಯಾರೂ ಆಗಿರದೇ, ವಿಜಯ ಶರ್ಮಾ ಅವರ ಸೋದರಳಿಯನಾಗಿದ್ದ. ವಿಜಯ ಶರ್ಮಾ ಅವರ ಮನೆಯಲ್ಲೇ ಇದ್ದ. ಗಿಳಿ ಆಶು ಎಂದು ಹೇಳುತ್ತಿದ್ದಂತೆ ವಿಜಯ್ ಅವರು, ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಪೊಲೀಸರು ಅಶುತೋಷ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇಡೀ ಪ್ರಕರಣ ಬಯಲಾಯಿತು.

ಇದನ್ನೂ ಓದಿ: Murder mystery | ಸೊಸೆಯ ಮೇಲೇ ಕಣ್ಣು ಹಾಕಿದ್ದ ಧೂರ್ತ ಮಾವನ ಸುಪಾರಿ ಮರ್ಡರ್‌: ಕೊಲ್ಲಿಸಿದ್ದು ಯಾರು?

ಇಬ್ಬರಿಗೂ ಜೀವಾವಧಿ ಶಿಕ್ಷೆ

ವಿಜಯ್ ಶರ್ಮಾ ಅವರು ಸೋದರಳಿಯ ಆಶುತೋಷ್ ಗೋಸ್ವಾಮಿ ಹಾಗೂ ಆತನ ಸ್ನೇಹಿತ ರೋನ್ನಿ ಮೆಸ್ಸೆ ಅವರಿಗೆ ಜೀವಾವಧಿ ಶಿಕ್ಷೆಯನ್ನು ಆಗ್ರಾ ನ್ಯಾಯಾಲಯವು ಮಾರ್ಚ್ 24ರಂದು ಪ್ರಕಟಿಸಿದೆ. ಪೊಲೀಸರು ತಮ್ಮ ವರದಿಯಲ್ಲಿ ಗಿಳಿಯ ಸಾಕ್ಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನೀಲಮ್ ಅವರಿಗೆ 14 ಬಾರಿ ಇರಿದು ಕೊಲ್ಲಲಾಗಿತ್ತು. ಅಲ್ಲದೇ ನಾಯಿಗೆ 9 ಬಾರಿ ಇರಿದು ಹತ್ಯೆ ಮಾಡಲಾಗಿತ್ತು ಎಂಬ ಮಾಹಿತಿ ಮರಣೋತ್ತರ ಪ್ರರೀಕ್ಷೆ ವರದಿಯಿಂದ ಗೊತ್ತಾಗಿತ್ತು. ಇದೇ ವೇಳೆ, ಆರೋಪಿಯ ಮೇಲೆ ನಾಯಿ ಮಾಡಿದ ಗಾಯಗಳು ಕೂಡ ಇದ್ದವು. ಇದು ಕೂಡ ಪೊಲೀಸರಿಗೆ ನೆರವಾಯಿತು.

Exit mobile version