Site icon Vistara News

President Election| ಪ್ರತಿಪಕ್ಷಗಳ ಒಡಕು ಮತ್ತು ಅವನತಿಗೆ ಕನ್ನಡಿ ಹಿಡಿದ ರಾಷ್ಟ್ರಪತಿ ಚುನಾವಣೆ

opposition

ನವದೆಹಲಿ: ದೇಶದ ೧೫ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ೬೪%ಕ್ಕೂ ಹೆಚ್ಚು ದಾಖಲೆಯ ಮತಗಳನ್ನು ಗಳಿಸಿ ಸುಲಭವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಈ ಐತಿಹಾಸಿಕ ಚುನಾವಣೆಯ ಫಲಿತಾಂಶಕ್ಕೆ ಸಂಭ್ರಮದಲ್ಲಿದೆ. ಮತ್ತೊಂದು ಕಡೆ ಪ್ರತಿಪಕ್ಷಗಳ ಒಡಕು, ಒಳಜಗಳ, ಒಗ್ಗಟ್ಟಿನ ಕೊರತೆ ಮತ್ತು ಅವನತಿಗೆ ಕೂಡ ಈ ಚುನಾವಣೆ ಕನ್ನಡಿ ಹಿಡಿದಿದೆ.

120 ಶಾಸಕರು, ೧೭ ಸಂಸದರಿಂದ ಕ್ರಾಸ್‌ ವೋಟಿಂಗ್

ಯಾವುದೇ ಹಂತದಲ್ಲಿ ಕೂಡ ಪ್ರತಿಪಕ್ಷಗಳ ಒಗ್ಗಟ್ಟು ಕಾಣಿಸಲಿಲ್ಲ. ಮಾತ್ರವಲ್ಲದೆ ನಾನಾ ರಾಜ್ಯಗಳಲ್ಲಿ ಪ್ರತಿಪಕ್ಷಗಳ ೧೨೦ ಶಾಸಕರು ಯಶ್ವಂತ್‌ ಸಿನ್ಹಾ ಬದಲಿಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೇ ಮತ ನೀಡಿದ್ದಾರೆ. ೧೭ ಸಂಸದರೂ ಕ್ರಾಸ್‌ ವೋಟಿಂಗ್‌ ಮಾಡಿದ್ದು, ದ್ರೌಪದಿ ಮುರ್ಮು ಅವರಿಗೆ ಅನುಕೂಲವಾಗಿತ್ತು. ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯದ ಅಭ್ಯರ್ಥಿ ಎನ್ನುವ ಅಂಶ ಪೂರಕವಾಗಿದ್ದರೂ, ಪ್ರತಿಪಕ್ಷಗಳ ಒಡಕು, ಅವುಗಳಿಗೆ ಮಾರಕವಾಗಿ ಪರಿಣಮಿಸಿದೆ. ದ್ರೌಪದಿ ಮುರ್ಮು ಗೆಲುವು ನಿರೀಕ್ಷಿತವಾಗಿದ್ದರೂ, ಪ್ರತಿಪಕ್ಷಗಳಿಂದ ಗಣನೀಯ ಸಂಖ್ಯೆಯಲ್ಲಿ ಮತಗಳನ್ನು ಸೆಳೆಯುವಲ್ಲಿ ಅವರು ಯಶಸ್ವಿಯಾಗಿರುವುದು ಗಮನಾರ್ಹ.

ಅಸ್ಸಾಂನಲ್ಲಿ ೨೨, ಮಧ್ಯಪ್ರದೇಶದಲ್ಲಿ ೧೯, ಮಹಾರಾಷ್ಟ್ರದಲ್ಲಿ ೧೬, ಉತ್ತರಪ್ರದೇಶದಲ್ಲಿ ೧೨, ಗುಜರಾತ್‌ನಲ್ಲಿ ೧೦, ಜಾರ್ಖಂಡ್‌ನಲ್ಲಿ ೧೦, ಬಿಹಾರದಲ್ಲಿ ೬, ಛತ್ತೀಸ್‌ಗಢದಲ್ಲಿ ೬, ರಾಜಸ್ಥಾನದಲ್ಲಿ ೫ ಮತ್ತು ಗೋವಾದಲ್ಲಿ ೪ ಶಾಸಕರು ಕ್ರಾಸ್‌ ವೋಟಿಂಗ್‌ ಮಾಡಿದ್ದು, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ನೀಡಿದ್ದಾರೆ.

ಯಶ್ವಂತ್‌ ಸಿನ್ಹಾರನ್ನು ಕಣಕ್ಕಿಳಿಸಿದ್ದೇ ಮುಳುವಾಯಿತೇ?

ರಾಷ್ಟ್ರಪತಿ ಚುನಾವಣೆಯ ಫಲಿತಾಂಶದ ಬಳಿಕ ಪ್ರತಿಪಕ್ಷಗಳಲ್ಲಿ ಸೋಲಿನ ಬಗ್ಗೆ ವಿಮರ್ಶೆ ನಡೆಯುತ್ತಿದೆ. ಕೆಲವರ ಪ್ರಕಾರ ಬಿಜೆಪಿ ವಿರುದ್ಧ ಬಿಜೆಪಿಯ ಮಾಜಿ ನಾಯಕ ಯಶ್ವಂತ್‌ ಸಿನ್ಹಾ ಅವರನ್ನು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇ ಸರಿಯಾದ ನಿರ್ಧಾರ ಆಗಿರಲಿಲ್ಲ. ಯಾರು ಸಮರ್ಥ ಅಭ್ಯರ್ಥಿ ಎಂಬುದರ ಬಗ್ಗೆಯೇ ಪ್ರತಿಪಕ್ಷ ನಾಯಕರಲ್ಲಿ ಗೊಂದಲ ಇತ್ತು. ಪ್ರತಿಪಕ್ಷಗಳು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಬಹುದಿತ್ತು. ಆದರೆ ದುರ್ಬಲ ಅಭ್ಯರ್ಥಿಯನ್ನು, ಅದೂ ಬಿಜೆಪಿಯ ಮಾಜಿ ನಾಯಕನನ್ನು ಕಣಕ್ಕಿಳಿಸುವ ಮೂಲಕ ತಮ್ಮ ಅದಕ್ಷತೆಯನ್ನು ಪ್ರದರ್ಶಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿನ್ಹಾ ಅವರನ್ನು ಕಣಕ್ಕಿಳಿಸಿದ್ದರಿಂದ ಬಿಜು ಜನತಾ ದಳ ಮತ್ತು ವೈಎಸ್‌ಆರ್‌ಸಿಪಿಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನೇ ಬೆಂಬಲಿಸಲು ಹಾದಿ ಸುಗಮವಾಯಿತು. ಇದರಿಂದಾಗಿ ಪ್ರತಿಪಕ್ಷಗಳ ಒಡಕು ಕೂಡ ಬಯಲಾಯಿತು. ತೃಣಮೂಲ ಕಾಂಗ್ರೆಸ್‌, ಒಡಿಶಾ ಮೂಲದ ಆದಿವಾಸಿ ಸಾಮಾಜಿಕ ಕಾರ್ಯಕರ್ತೆ ತುಳಸಿ ಮುಂಡಾ ಅವರ ಹೆಸರನ್ನು ಸೂಚಿಸಿತ್ತು. ಅವರನ್ನೇ ಕಣಕ್ಕಿಳಿಸಿದ್ದರೆ ಪ್ರಬಲ ಚೆನ್ನಾಗಿರುತ್ತಿತ್ತು ಎಂದು ಟಿಎಂಸಿಯ ನಾಯಕರೊಬ್ಬರು ಹೇಳಿದ್ದಾರೆ.

ಉಪ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲೂ ಒಡಕು

ಉಪರಾಷ್ಟ್ರಪತಿ ಹುದ್ದೆಯ ಆಯ್ಕೆಯಲ್ಲೂ ಪ್ರತಿಪಕ್ಷಗಳು ಒಮ್ಮತ ಕಂಡುಕೊಳ್ಳುವಲ್ಲಿ ವಿಫಲವಾಗಿವೆ. ತೃಣಮೂಲ ಕಾಂಗ್ರೆಸ್‌ ಮತದಾನದಿಂದ ದೂರ ಉಳಿಯುವುದಾಗಿ ತಿಳಿಸಿದೆ. ಇದರಿಂದಾಗಿ ಪ್ರತಿಪಕ್ಷಗಳ ಒಳಜಗಳ ಬೀದಿಗೆ ಬಂದಂತಾಗಿದೆ. ಮಾರ್ಗರೆಟ್‌ ಆಳ್ವಾ ಅವರಿಗೆ ಬೆಂಬಲಿಸಲು ತೃಣಮೂಲ ಕಾಂಗ್ರೆಸ್‌ ಸುತರಾಂ ಒಪ್ಪುತ್ತಿಲ್ಲ. ಮಾರ್ಗರೆಟ್‌ ಆಳ್ವಾ ಅವರ ಹೆಸರನ್ನು ಅಂತಿಮಪಡಿಸುವ ಮುನ್ನ ನಮ್ಮನ್ನು ಸಂಪರ್ಕಿಸಿಲ್ಲ ಎಂಬುದು ಟಿಎಂಸಿ ಆರೋಪ. ಇಂಥ ಕ್ಷುಲ್ಲಕ ಕಾರಣಗಳಿಂದ ಪ್ರತಿಪಕ್ಷಗಳ ಹುಳುಕು ಬಯಲಾಗಿದೆ.

Exit mobile version