ಗುವಾಹಟಿ: ಶಿವಸೇನಾದ ರೆಬೆಲ್ ಶಾಸಕರು ಮುಂಬಯಿಗೆ ನಾಳೆಯೇ (ಜೂನ್ ೩೦) ಆಗಮಿಸಲಿದ್ದು, ಅಸೆಂಬ್ಲಿ ಸದನದಲ್ಲಿ ಸರ್ಕಾರದ ವಿರುದ್ಧ ಬಹುಮತ ಪರೀಕ್ಷೆಯಲ್ಲಿ ಭಾಗವಹಿಸಲಿರುವುದಾಗಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಗುವಾಹಟಿಯಲ್ಲಿ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಶಿಂಧೆ, ಗುರುವಾರ ಬೆಳಗ್ಗೆ ಮುಂಬಯಿ ತಲುಪುವುದಾಗಿ ತಿಳಿಸಿದರು. ಮಹಾರಾಷ್ಟ್ರದ ಶಾಂತಿ ಮತ್ತು ಸಂತೋಷಕ್ಕಾಗಿ ಇಲ್ಲಿಗೆ ಬಂದಿರುವುದಾಗಿಯೂ ಹೇಳಿದರು.
ಇಂದು ಗೋವಾ, ನಾಳೆ ಮುಂಬಯಿಗೆ ರೆಬೆಲ್ ಶಾಸಕರ ದೌಡು
ಗುವಾಹಟಿಯಿಂದ ಇಂದು ಗೋವಾಗೆ ತೆರಳಲಿರುವ ರೆಬೆಲ್ ಶಾಸಕರು, ಅಲ್ಲಿನ ತಾಜ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ನಾಳೆ ಮುಂಬಯಿಗೆ ತೆರಳಲಿದ್ದಾರೆ. ಬಹುಮತ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಗುವಾಹಟಿ ಹೋಟೆಲ್ ಬಳಿ ಎರಡು ಹವಾನಿಯಂತ್ರಿತ ಬಸ್‌ಗಳು ಶಾಸಕರನ್ನು ಏರ್‌ಪೋರ್ಟಿಗೆ ಕರೆದೊಯ್ಯಲು ರೆಡಿಯಾಗಿವೆ. ಗೋವಾ ಮತ್ತು ಮುಂಬಯಿನಲ್ಲಿ ಹೋಟೆಲ್ ರೂಮ್‌ಗಳು ಬುಕ್ ಆಗಿವೆ. ಇದರೊಂದಿಗೆ ಮಹಾರಾಷ್ಟ್ರ ರಾಜಕಾರಣ ಕ್ಲೈಮ್ಯಾಕ್ಸ್‌ನತ್ತ ತಿರುಗಿದೆ.
ಸದನದಲ್ಲಿ ಬಹುಮತ ಪರೀಕ್ಷೆ ನಡೆಸುವ ಬಗ್ಗೆ ರಾಜ್ ಭವನದಿಂದ ಯಾವುದೇ ಔಪಚಾರಿಕ ಘೋಷಣೆ ಆಗಿಲ್ಲ. ಮತ್ತೊಂದು ಕಡೆ ಉದ್ಧವ್ ಠಾಕ್ರೆ ಪಾಳೆಯ ಸಂಭವನೀಯ ಬಹುಮತ ಪರೀಕ್ಷೆಯನ್ನು ಮುಂದೂಡಲು ಯತ್ನಿಸುತ್ತಿದೆ. ಇದರ ಭಾಗವಾಗಿ ಅಗತ್ಯವಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲೇರಲೂ ನಿರ್ಧರಿಸಿದೆ.
ರಾಜ್ಯಪಾಲರನ್ನು ಭೇಟಿಯಾದ ಫಡ್ನವೀಸ್
ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಅವರನ್ನು ರಾಜ್‌ಭವನದಲ್ಲಿ ಭೇಟಿಯಾಗಿದ್ದು, ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಬಹಮತ ಕಳೆದುಕೊಂಡಿರುವುದರಿಂದ ಸದನದಲ್ಲಿ ಬಹುಮತ ಪರೀಕ್ಷೆಯನ್ನು ನಡೆಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರೆಬೆಲ್ ಶಾಸಕರಿಗೆ ಮುಂಬಯಿಗೆ ಬಂದು ತಮ್ಮೊಡನೆ ಮಾತನಾಡುವಂತೆ ಮನವಿ ಮಾಡಿದ್ದಾರೆ. ಮತ್ತೊಂದು ಕಡೆ ಬಿಜೆಪಿ, ಶಿವಸೇನಾದ ರೆಬೆಲ್ ಶಾಸಕರಿಂದ ಹೊಸ ಸರ್ಕಾರ ರಚನೆಗೆ ಪ್ರಸ್ತಾಪ ಬಂದರೆ ಪರಿಗಣಿಸುವುದಾಗಿ ತಿಳಿಸಿದೆ.