ನವ ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಪಿಎಂಎಲ್‌ಎ ಕಾಯಿದೆಯ ಅಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಹಾಗೂ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಅಕ್ರಮ ಹಣ ವರ್ಗಾವಣೆ ಯಡೆ ಕಾಯಿದೆ-೨೦೦೨ರ ಅಡಿಯಲ್ಲಿ ಸೆಕ್ಷನ್ ೫, ೮(೪), ೧೫, ೧೭ ಮತ್ತು ೧೯ರ ಸೆಕ್ಷನ್‌ಗಳ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಸೆಕ್ಷನ್‌ಗಳು ಜಾರಿನಿರ್ದೇಶನಾಲಯಕ್ಕೆ ಅರೆಸ್ಟ್, ಆಸ್ತಿ ಮುಟ್ಟುಗೋಲು, ಜಪ್ತಿ ಮಾಡುವ ಅದಿಕಾರವನ್ನು ನೀಡಿದೆ.
ಪಿಎಂಎಲ್‌ಎ ಕಾಯಿದೆಯ ಅಡಿಯಲ್ಲಿ ಜಾಮೀನು ಪಡೆಯಲು ಎರಡು ಷರತ್ತುಗಳನ್ನು ವಿಧಿಸುವ ಅಂಶವನ್ನೂ ಕೋರ್ಟ್ ಮಾನ್ಯ ಮಾಡಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಇ.ಡಿಯು ತನ್ನ ಕೇಸ್ ರಿಪೋರ್ಟ್‌ಗಳನ್ನು (ECIR) ಎಲ್ಲಿಯೂ ಹಂಚಿಕೊಳ್ಳಬೇಕಿಲ್ಲ. ಅದನ್ನು ಎಫ್‌ಐಆರ್‌ಗೆ ಹೋಲಿಸಲು ಸಾಧ್ಯವಿಲ್ಲ. ಇಸಿಐಆರ್ (Enforcement case information report) ಇ.ಡಿಯ ಆಂತರಿಕ ವರದಿಯಾಗಿರುತ್ತದೆ. ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ.
ಬಂಧಿಸುವ ಸಂದರ್ಭ ಕಾರಣಗಳನ್ನು ತಿಳಿಸಿದರೆ ಸಾಕು: ಸುಪ್ರೀಂಕೋರ್ಟ್ ನೀಡಿರುವ ಮಹತ್ವದ ತೀರ್ಪು ಇದಾಗಿದ್ದು, ಜಾರಿ ನಿರ್ದೇಶನಾಲಯದ ತನಿಖಾಧಿಕಾರ, ಅರೆಸ್ಟ್, ಮುಟ್ಟುಗೋಲು ಪ್ರಕ್ರಿಯೆಗಳಲ್ಲಿ ಉಂಟಾಗುತ್ತಿದ್ದ ಕಳವಳಗಳನ್ನು ಬಗೆಹರಿಸಿದೆ. ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು ಪೊಲೀಸ್ ಇಲಾಖೆಯು ಎಫ್‌ಐಆರ್ ದಾಖಲಿಸುವಂತೆ ಇಸಿಐಆರ್ ಅನ್ನು ದಾಖಲಿಸಬೇಕಾಗಿಲ್ಲ. ವ್ಯಕ್ತಿಗೆ ಆತನ ಬಂಧನದ ಕಾರಣಗಳನ್ನು ತಿಳಿಸಿ ಅರೆಸ್ಟ್ ಮಾಡಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
” ಸುಪ್ರೀಂಕೋರ್ಟ್ ಪಿಎಂಎಲ್‌ಎ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರವನ್ನು ಎತ್ತಿ ಹಿಡಿದಿದೆ. ಎಲ್ಲರೂ ಅದನ್ನು ಗೌರವಿಸಬೇಕುʼʼ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಕಾಂಗ್ರೆಸ್‌ಗೆ ನಿರಾಸೆ: ಪಿಎಂಎಲ್‌ಎ ಮತ್ತು ಜಾರಿ ನಿರ್ದೇಶನಾಲಯದ ಹಕ್ಕುಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀರ್ಪು ನಿರಾಸೆ ಮೂಡಿಸಿದೆ. ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಸರ್ವಾಧಿಕಾರದ ವಾತಾವರಣ ಇದೆ. ಈ ತೀರ್ಪಿನಿಂದ ಕೇಂದರ ಸರ್ಕಾರ ಇ.ಡಿಯನ್ನು ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಬಹುದು ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.