ಹೈದರಾಬಾದ್: ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ 19 ವರ್ಷದ ಯುವಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಪರ್ಡಿ ಎಂಬ ಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂಥ ಅನಾಹುತಗಳು ಪದೇ ಪದೆ ಯಾಕೆ ನಡೆಯುತ್ತಿವೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಮಹಾರಾಷ್ಟ್ರ ಮೂಲದ ಮುತ್ಯಮ್ ಎಂಬ ಹೆಸರಿನ ಯುವಕ ಸಂಬಂಧಿಕರ ಮದುವೆಗೆಂದು ಹೈದರಾಬಾದ್ಗಿಂತ 200 ಕಿಲೋಮೀಟರ್ ದೂರದಲ್ಲಿರುವ ಪರ್ಡಿ ನಗರಕ್ಕೆ ಬಂದಿದ್ದ. ತೆಲುಗು ಸಿನಿಮಾ ಈಡಿಯೆಟ್ನ ಹಾಡೊಂದಕ್ಕೆ ಡಾನ್ಸ್ ಮಾಡುತ್ತಿದ್ದ. ಜತೆಗಿದ್ದವರು ಡಾನ್ಸ್ ಸಂಭ್ರಮವನ್ನು ವಿಡಿಯೊ ರೆಕಾರ್ಡ್ ಮಾಡುತ್ತಿದ್ದರು. ಹಾಡಿನ ನಡುವೆ ಒಂದು ಸಲ ಸುಮ್ನನಾದ ಮತ್ಯಮ್ ಬೋರಲು ಬೀಳುತ್ತಾನೆ. ಸುತ್ತಲಿದ್ದ ಜನರು ಅದು ಕೂಡ ಒಂದು ಡಾನ್ ಸ್ಟೆಪ್ ಎಂದು ಸ್ವಲ್ಪ ಹೊತ್ತು ಕಿರುಚಾಡುತ್ತಾ ಸಂಭ್ರಮಿಸುತ್ತಾರೆ. ಸಾಕಷ್ಟು ಹೊತ್ತಾದ ಬಳಿಕವೂ ಆತ ಎದ್ದೇಳದ ಹಿನ್ನೆಲೆಯಲ್ಲಿ ಬಳಿಗೆ ಬಂದು ನೋಡಿದಾಗ ದೇಹ ಚಲನೆ ನಿಂತು ಹೋಗಿತ್ತು.
ಸಂಬಂಧಿಕರು ತಕ್ಷಣ ಬಹಿಂಸಾ ಪ್ರದೇಶದ ಆಸ್ಪತ್ರೆಯೊಂದಕ್ಕೆ ಆತನನ್ನು ದಾಖಲಿಸಿದರೂ, ದಾರಿ ಮಧ್ಯೆಯೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಹೃದಯಾಘಾತದಿಂದ ಯುವಕ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ : Karwar News | ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿ ಮನೆಗೆ ಮರಳುತ್ತಿದ್ದ ವೇಳೆ ಕುಸಿದು ಬಿದ್ದು ಸಾವು
ಹೈದಾರಾಬಾದ್ನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಎರಡನೇ ಘಟನೆ ಇದಾಗಿದೆ. ಫೆಬ್ರವರಿ 22ರಂದ 24 ವರ್ಷದ ಪೋಲಿಸ್ ಕಾನ್ಸ್ಟಬಲ್ ಒಬ್ಬರು ಜಿಮ್ನಲ್ಲಿ ವರ್ಕೌಟ್ ಮಾಡುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು.