Site icon Vistara News

Namesake: ರಾಹುಲ್‌ಗಳು, ಲಾಲುಗಳು; ಒಂದೇ ಹೆಸರಿನವರ ಸ್ಪರ್ಧೆ ಕುರಿತು ಕೋರ್ಟ್‌ ಮಹತ್ವದ ಹೇಳಿಕೆ

lok sabha election 2024 supreme court

ನವದೆಹಲಿ: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಡಾ.ಸಿ.ಎನ್. ಮಂಜುನಾಥ್‌ (Dr C N Manjunath) ಅವರ ವಿರುದ್ಧ ರಾಜಕೀಯ ತಂತ್ರಗಾರಿಕೆಯ ಫಲವಾಗಿ ಮಂಜುನಾಥ್‌ ಹೆಸರಿನ ಹಲವು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿಯೂ (Lok Sabha Election) ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನ ಹಲವರು ಸ್ಪರ್ಧಿಸಿದ್ದರು. ಇದರ ಬೆನ್ನಲ್ಲೇ, ಒಂದೇ ಹೆಸರಿನ ಹಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಬೇಕು ಎಂಬುದಾಗಿ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದೆ.

ಕೇರಳ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ ಪಿಐಎಲ್‌ ವಿಚಾರಣೆ ನಡೆಸಿದ ನ್ಯಾಯಾಲಯವು, “ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ನಾಳೆ, ರಾಹುಲ್‌ ಗಾಂಧಿಯೋ, ಲಾಲು ಪ್ರಸಾದ್‌ ಅವರ ಹೆಸರಿನವರೋ ಚುನಾವಣೆಗೆ ಸ್ಪರ್ಧಿಸಲು ಮುಂದಾದರೆ, ನಾವು ಅವರನ್ನು ತಡೆಯಲು ಆಗುವುದಿಲ್ಲ. ಯಾವುದೇ ವ್ಯಕ್ತಿಗಳ ಹೆಸರನ್ನು ಅವರ ತಂದೆ-ತಾಯಿ ಇಟ್ಟಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ, ಒಂದೇ ಹೆಸರಿನ ಹಲವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬುದಾಗಿ ಹೇಳಲು ಆಗುವುದಿಲ್ಲ” ಎಂದು ನ್ಯಾ.ಬಿ.ಆರ್‌.ಗವಾಯಿ ನೇತೃತ್ವದ ನ್ಯಾಯಪೀಠವು ಸ್ಪಷ್ಟಪಡಿಸಿತು.

“ದೇಶದಲ್ಲಿ ರಾಹುಲ್‌, ಲಾಲು ಪ್ರಸಾದ್‌ ಎಂಬ ಹೆಸರಿನ ತುಂಬ ಜನ ಇರುತ್ತಾರೆ. ಪ್ರಮುಖ ರಾಜಕೀಯ ನಾಯಕರ ಹೆಸರು ಇಟ್ಟುಕೊಂಡ ಮಾತ್ರಕ್ಕೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಡ ಎಂಬುದಾಗಿ ಆದೇಶಿಸಲು ಆಗುವುದಿಲ್ಲ. ವ್ಯಕ್ತಿಯ ತಂದೆ-ತಾಯಿ ಹೆಸರಿಟ್ಟರು ಎಂದ ಮಾತ್ರಕ್ಕೆ, ಅವರಿಗೆ ಚುನಾವಣೆಯಿಂದಲೇ ನಿಷೇಧ ಮಾಡುವುದು ಸರಿಯಲ್ಲ. ಹೆಸರಿನ ಕಾರಣಕ್ಕಾಗಿ ಯಾರನ್ನೂ ಸ್ಪರ್ಧಿಸದಂತೆ ತಡೆಯಲು ಆಗುವುದಿಲ್ಲ” ಎಂಬುದಾಗಿ ಕೋರ್ಟ್‌ ಸ್ಪಷ್ಟಪಡಿಸಿ, ಅರ್ಜಿಯನ್ನು ತಿರಸ್ಕರಿಸಿತು.

ಅರ್ಜದಾರರ ವಾದವೇನು?

ಕೇರಳದ ಸಬು ಸ್ಟೀಫನ್‌ ಎಂಬುವರು ಪಿಐಎಲ್‌ ಸಲ್ಲಿಸಿದ್ದು, ಅವರ ಪರವಾಗಿ ವಿ.ಕೆ.ಬಿಜು ಅವರು ವಾದ ಮಂಡಿಸಿದರು. “ಚುನಾವಣೆ ವೇಳೆ ಒಬ್ಬ ಅಭ್ಯರ್ಥಿಯ ಪ್ರತಿಸ್ಪರ್ಧಿಯು ಉದ್ದೇಶಪೂರ್ವಕವಾಗಿ ಪ್ರತಿ ಸ್ಪರ್ಧಿಯ ಹೆಸರಿರುವ ಹಲವರನ್ನು ಚುನಾವಣೆ ಕಣಕ್ಕೆ ಇಳಿಸಿ, ಮತಗಳನ್ನು ವಿಭಜಿಸುವ ಪ್ರಯತ್ನ ಮಾಡಲಾಗುತ್ತದೆ. ಜನರಲ್ಲಿ ಗೊಂದಲ ಮೂಡಿಸಿ ಮತಗಳನ್ನು ಒಡೆಯುವ ಕುತಂತ್ರ ನಡೆಯುತ್ತದೆ. ಹಾಗಾಗಿ, ಚುನಾವಣೆಯಲ್ಲಿ ಒಂದೇ ಹೆಸರಿನ ಹಲವರು ಸ್ಪರ್ಧಿಸದಂತೆ ನಿಷೇಧಿಸಬೇಕು” ಎಂಬುದಾಗಿ ಮನವಿ ಮಾಲಾಗಿತ್ತು.

ಇದನ್ನೂ ಓದಿ: Rajyasabha Election | ಖರ್ಗೆ ಡೆಲ್ಲಿಯಲ್ಲಿದ್ದರೆ ಸಿದ್ದು ವಿಪ್‌ ನೀಡಿದರು

Exit mobile version