ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳಿರುವ ತನ್ನ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (BJP) ಶನಿವಾರ ಬಿಡುಗಡೆ ಮಾಡಿದೆ. ಅದರಲ್ಲಿ 33 ಹಾಲಿ ಸಂಸದರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಲಾಗಿದೆ. ಅದರಲ್ಲಿಯೂ ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ, ಮಾಜಿ ಕೇಂದ್ರ ಸಚಿವ ಮತ್ತು ಹಜಾರಿಬಾಗ್ ಸಂಸದ ಜಯಂತ್ ಸಿನ್ಹಾ, ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧುರಿ ಈ ಪಟ್ಟಿಯಲ್ಲಿ ಇಲ್ಲದಿರುವುದು ಚರ್ಚೆಯ ವಿಷಯವಾಗಿದೆ. ಯಾಕೆಂದರೆ ಇವರೆಲ್ಲರೂ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ವಿವಾದಗಳಿಂದ ಕೂಡಿದ ಹೇಳಿಕೆ ನೀಡಿ ಬಿಜೆಪಿ ಟಿಕೆಟ್ ಗಿಟ್ಟಿಸಬಹುದೆಂಬ ಜನನಾಯಕರ ಊಹೆಗೆ ವರಿಷ್ಠರು ಪೆಟ್ಟು ಕೊಟ್ಟಿದ್ದಾರೆ.
ಮೊದಲ ಪಟ್ಟಿಯಲ್ಲಿ ದೆಹಲಿಯ ಲೋಕಸಭಾ ಸ್ಥಾನಗಳಿಗೆ ಬಿಜೆಪಿ ಐದು ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಅವರಲ್ಲಿ ನಾಲ್ವರು ಹಾಲಿ ಸಂಸದರ ಹೆಸರು ನಾಪತ್ತೆಯಾಗಿದೆ! ಎರಡು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಹರ್ಷವರ್ಧನ್ ಅವರನ್ನು ಕೈಬಿಟ್ಟು ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಪ್ರವೀಣ್ ಖಂಡೇಲ್ವಾಲ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಪಶ್ಚಿಮ ದೆಹಲಿ ಕ್ಷೇತ್ರಕ್ಕೆ ಬಿಜೆಪಿ ಎರಡು ಬಾರಿ ಸಂಸದರಾಗಿದ್ದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಬದಲಿಗೆ ಕಮಲ್ಜೀತ್ ಸೆಹ್ರಾವತ್ ಅವರನ್ನು ಕಣಕ್ಕಿಳಿಸಿದೆ. ದಿವಂಗತ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ಪ್ರಸ್ತುತ ಮೀನಾಕ್ಷಿ ಲೇಖಿ ಪ್ರತಿನಿಧಿಸುವ ನವದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ದಕ್ಷಿಣ ದೆಹಲಿಯಿಂದ ರಮೇಶ್ ಬಿಧುರಿ ಅವರನ್ನು ಕೈಬಿಟ್ಟು ಬಿಜೆಪಿ ರಾಮ್ವೀರ್ ಸಿಂಗ್ ಬಿಧುರಿ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.
ಸಾಧ್ವಿ ಪ್ರಜ್ಞಾ ಠಾಕೂರ್
ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಿಂದ ಹಾಲಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಬದಲಿಗೆ ಬಿಜೆಪಿ ಅಲೋಕ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಠಾಕೂರ್ ‘ದೈತ್ಯ ಸಂಹಾರಿ’ ಯಾಗಿ ಕಾಣಿಸಿಕೊಂಡರು. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು 3,64,822 ಮತಗಳ ಅಂತರದಿಂದ ಸೋಲಿಸಿದವರು ಅವರು. ಚುನಾವಣಾ ಯಶಸ್ಸಿನ ಹೊರತಾಗಿಯೂ, ಠಾಕೂರ್ ಅಧಿಕಾರಾವಧಿಯು ವಿವಾದಗಳಿಂದ ಹಾಳಾಯಿತು. ಅಶೋಕ್ ಚಕ್ರ ಪ್ರಶಸ್ತಿ ಪುರಸ್ಕೃತ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಪೌರಾಣಿಕ ವ್ಯಕ್ತಿಗಳಾದ ರಾವಣ ಮತ್ತು ಕಂಸನಿಗೆ ಹೋಲಿಸುವ ಮೂಲಕ ಅವರು ಆಕ್ರೋಶ ಹುಟ್ಟುಹಾಕಿದ್ದರು. ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಕರ್ಕರೆ ಅವರ ನಿಧನದ ಬಗ್ಗೆ ಅವರ ಹೇಳಿಕೆಗಳು ಮತ್ತಷ್ಟು ವಿವಾದವನ್ನು ಹುಟ್ಟುಹಾಕಿದವು. ಇದು ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್ ಪಡೆಯುವಂತೆ ಮಾಡಿತ್ತು.
ಇದನ್ನೂ ಓದಿ : BJP Candidates List: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟಿಲ್ಲ!
ಸಾಧ್ವಿ ಠಾಕೂರ್, ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೊಗಳುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದರು. ಕ್ಷಮೆಯಾಚಿಸಿದರೂ, ಅವರ ಹೇಳಿಕೆಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಖಂಡನೆಗೆ ಗುರಿಯಾಗುತ್ತಲೇ ಇದ್ದವು,
ರಮೇಶ್ ಭಿದುರಿ
ಬಿಜೆಪಿ ಸಂಸದ ರಮೇಶ್ ಬಿಧುರಿ ಇತ್ತೀಚೆಗೆ ಚಂದ್ರಯಾನ -3 ಮಿಷನ್ ಯಶಸ್ಸಿನ ಕುರಿತ ಪಾರ್ಲಿಮೆಂಟ್ ಚರ್ಚೆಯ ಸಂದರ್ಭದಲ್ಲಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದರು. ಡ್ಯಾನಿಶ್ ಅಲಿಯನ್ನು ಗುರಿಯಾಗಿಸಿಕೊಂಡಿದ್ದ ಬಿಧುರಿ ಅವರ ವಿವಾದಾತ್ಮಕ ಹೇಳಿಕೆಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಗುರಿಯಾದವು. ಅದಕ್ಕಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತಮ್ಮ ಪಕ್ಷದ ಸಂಸದ ರಮೇಶ್ ಬಿಧುರಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು ಎಂದು ವರದಿಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಧಿವೇಶನದಲ್ಲಿ ಬಿಧುರಿ ಅವರ ನಡವಳಿಕೆಗೆ ತಕ್ಷಣ ವಿಷಾದ ವ್ಯಕ್ತಪಡಿಸಿದ್ದರು.
ಪರ್ವೇಶ್ ವರ್ಮಾ
ನವದೆಹಲಿಯ ಪಶ್ಚಿಮ ದೆಹಲಿ ಕ್ಷೇತ್ರದಿಂದ ಬಿಜೆಪಿ ತನ್ನ ಹಾಲಿ ಸಂಸದ ಪರ್ವೇಶ್ ವರ್ಮಾ ಅವರನ್ನು ಕೈಬಿಟ್ಟು ಕಮಲ್ಜೀತ್ ಸೆಹ್ರಾವತ್ ಅವರನ್ನು ಕಣಕ್ಕಿಳಿಸಿದೆ. ಕಮಲ್ಜೀತ್ ಸಹ್ರಾವತ್ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನ ಮಾಜಿ ಮೇಯರ್ ಮತ್ತು ದೆಹಲಿ ಎಂಸಿಡಿಯಲ್ಲಿ ಪಕ್ಷದ ಪ್ರಬಲ ಮುಖಗಳಲ್ಲಿ ಒಬ್ಬರು. ಕಳೆದ ವರ್ಷ, ನಿರ್ದಿಷ್ಟ ಸಮುದಾಯವೊಂದಕ್ಕೆ “ಆರ್ಥಿಕ ಬಹಿಷ್ಕಾರ” ಮಾಡಲು ಪರ್ವೇಶ್ ವರ್ಮಾ ಕರೆ ನೀಡಿದ್ದರು. ಅದನ್ನು ಬಿಜೆಪಿಯ ನಾಯಕತ್ವವು ಬಲವಾಗಿ ಖಂಡಿಸಿತ್ತು. ಕಳೆದ ವರ್ಷ ಅಕ್ಟೋಬರ್ 9 ರಂದು ಪೂರ್ವ ದೆಹಲಿಯಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ಥಳೀಯ ಘಟಕ ಮತ್ತು ಇತರ ಹಿಂದೂ ಸಂಘಟನೆಗಳು ಆಯೋಜಿಸಿದ್ದ ‘ವಿರಾಟ್ ಹಿಂದೂ ಸಭಾ’ ಎಂಬ ಸಭೆಯಲ್ಲಿ ವರ್ಮಾ ಈ ಹೇಳಿಕೆ ನೀಡಿದ್ದರು. ಭಾಷಣದಲ್ಲಿ ವರ್ಮಾ ನಿರ್ದಿಷ್ಟ ಸಮುದಾಯವನ್ನು ಸ್ಪಷ್ಟವಾಗಿ ಹೆಸರಿಸದೆ “ಈ ಜನರನ್ನು” ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಕರೆ ಕೊಟ್ಟಿದ್ದರು.
ಜಯಂತ್ ಸಿನ್ಹಾ
ಹಜಾರಿಬಾಗ್ ಸಂಸದ ಜಯಂತ್ ಸಿನ್ಹಾ ಅವರ ಬದಲಿಗೆ ಬಿಜೆಪಿಯ ಹಜಾರಿಬಾಗ್ ಶಾಸಕ ಮನೀಶ್ ಜೈಸ್ವಾಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಜೈಸ್ವಾಲ್ 2019 ರಲ್ಲಿ ಹಜಾರಿಬಾಗ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಾ.ರಾಮಚಂದ್ರ ಪ್ರಸಾದ್ ಅವರನ್ನು ಸೋಲಿಸುವ ಮೂಲಕ ಗೆದ್ದಿದ್ದರು.
2017 ರಲ್ಲಿ ಜಾರ್ಖಂಡ್ನ ರಾಮಗಢದಲ್ಲಿ ಮಾಂಸ ವ್ಯಾಪಾರಿಯನ್ನು ಥಳಿಸಿ ಹತ್ಯೆ ಮಾಡಿದ ಆರೋಪಿಗಳ ಕಾನೂನು ಶುಲ್ಕವನ್ನು ಪಾವತಿಸಲು ತಾನು ಮತ್ತು ಇತರ ಕೆಲವು ಬಿಜೆಪಿ ನಾಯಕರು ಆರ್ಥಿಕ ನೆರವು ನೀಡಿದ್ದೇವೆ ಎಂದು ಜಯಂತ್ ಸಿನ್ಹಾ 2019 ರಲ್ಲಿ ಹೇಳಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮತ್ತು ನೇರವಾಗಿ ಹಜಾರಿಬಾಗ್ನಲ್ಲಿರು ತಮ್ಮ ನಿವಾಸಕ್ಕೆ ಕರೆದು ಆರು ಆರೋಪಿಗಳನ್ನು ಸನ್ಮಾನಿಸಿದ್ದರು. ಇದ ವೈರಲ್ ಆಗಿತ್ತು.