Site icon Vistara News

Cyber Crime: ಕಾಣೆಯಾದ ಮಗು ಸಿಕ್ಕಿದೆ ಎಂದು 900 ಕುಟುಂಬಗಳಿಂದ ಹಣ ವಸೂಲಿ ಮಾಡಿದರು!

They gets money from 900 families saying that they found a missing child

ನವದೆಹಲಿ: ಸೈಬರ್ ವಂಚಕರು (Cyber Crime) ಇದುವರೆಗೆ ನಿಮಗೆ ಫೋನ್ ಕರೆ ಮಾಡಿ, ನಿಮ್ಮ ಮಾಹಿತಿ ಪಡೆದುಕೊಂಡು ನಾನಾ ರೀತಿಯಲ್ಲಿ ವಂಚಿಸುತ್ತಿದ್ದರು. ಆದರೆ, ಈಗ ಪತ್ತೆಯಾಗಿರುವ ಪ್ರಕರಣದಲ್ಲಿ ಸೈಬರ್ ವಂಚಕರ ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ. ಮಕ್ಕಳ ನಾಪತ್ತೆಯಾಗಿರುವ (Missing Child) ಪೋಷಕರಿಗೆ ಪೋಲೀಸ್ ಸೋಗಿನಲ್ಲಿ ಫೋನ್ ಮಾಡಿ ವಂಚನೆ ಎಸಗುತ್ತಿದ್ದಾರೆ. ನಿಮ್ಮ ಮಗು ಮತ್ತೊಂದು ನಗರದಲ್ಲಿ ಪತ್ತೆಯಾಗಿದೆ. ಅಲ್ಲಿಂದ ಕರೆದುಕೊಂಡ ಬರಲು ಇಷ್ಟಿಷ್ಟು ಹಣ ಬೇಕು ಎಂದು ಹೇಳಿ, ಸಂತ್ರಸ್ತ ಪೋಷಕರಿಂದ (Missing Child Parents) ಹಣ ವಸೂಲಿ ಮಾಡುತ್ತಿರುವ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ .

ಮಕ್ಕಳು ನಾಪತ್ತೆಯಾಗಿರುವ ದೆಹಲಿ-ಎನ್‌ಸಿಆರ್‌ ಪ್ರದೇಶದ 900 ಕ್ಕೂ ಹೆಚ್ಚು ಕುಟುಂಬಗಳ ಪರಿಸ್ಥಿತಿಯನ್ನು ತನ್ನ ವಂಚನೆಗೆ ಬಳಸಿಕೊಂಡ ಉತ್ತರ ಪ್ರದೇಶ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಅಧ್ಯಯನ ಮಾಡಿರುವ ಪದವೀಧರನನ್ನು ಈ ಪ್ರಕರಣಕ್ಕೆ ಸಂಬಧಿಸಿದಂತೆ ಬಂಧಿಸಲಾಗಿದೆ. ಕಾಣೆಯಾದವರ ರಿಜಿಸ್ಟರ್‌ನಿಂದ ಪೋಷಕರ ವಿವರಗಳನ್ನು ಪಡೆದು ಅವರಿಗೆ ಕರೆ ಮಾಡಿ ಪೊಲೀಸ್ ಅಧಿಕಾರಿಯಂತೆ ಪೋಸ್ ಕೊಡುತ್ತಿದ್ದ. ನಂತರ ಅವರಿಗೆ ಬೇರೆ ನಗರದಲ್ಲಿ ಮಗು ಪತ್ತೆಯಾಗಿದೆ ಎಂದು ನಂಬಿಸಿ, ಪೊಲೀಸರಿಗೆ ಅವರನ್ನು ಮರಳಿ ಪಡೆಯಲು ಸಹಾಯ ಮಾಡಲು ಸ್ವಲ್ಪ ಹಣವನ್ನು ವರ್ಗಾಯಿಸಲು ಪೋಷಕರಿಗೆ ಸೂಚಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದುಹೋಗಿರುವ ಮಗು ಸಿಕ್ಕಿದೆ ಎಂಬ ಖುಷಿಯಲ್ಲಿ ಪೋಷಕರು ಹಣವನ್ನು ವರ್ಗಾವಣೆ ಮಾಡುತ್ತಿದ್ದರು. ಅಂತಿಮವಾಗಿ ಅವರು ತಾವು ಮೋಸ ಹೋಗಿದ್ದಾಗಿ ತಿಳಿದು ತೀವ್ರ ದುಃಖಪಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಡೀ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ನವೆಂಬರ್ 15 ರಂದು ಉತ್ತರ ದೆಹಲಿಯ ವಜೀರಾಬಾದ್ ಪೊಲೀಸ್ ಠಾಣೆಗೆ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ವರದಿ ಮಾಡಲು ಪ್ರದೇಶದ ತಂದೆಯಿಂದ ದೂರು ಸ್ವೀಕರಿಸಲಾಯಿತು. ಮಾಹಿತಿಯನ್ನು ಪಡೆದುಕೊಂಡ ಪೊಲೀಸ್ ಅಧಿಕಾರಿಗಳು ವರದಿಯನ್ನು ದೂರು ದಾಖಲಿಸಿಕೊಂಡರು. ನಂತರ ದೆಹಲಿ ಪೊಲೀಸರ ಕಾಣೆಯಾದ ವ್ಯಕ್ತಿಯ ಪೋರ್ಟಲ್‌ಗೆ ಮಗು ಮತ್ತು ಅವಳ ಕುಟುಂಬದ ವಿವರಗಳನ್ನು ಅಪ್‌ಲೋಡ್ ಮಾಡಿದ್ದರು.

ನಂತರ ಸಂತ್ರಸ್ತ ಕುಟುಂಬದವರಿಗೆ ಒಬ್ಬ ವ್ಯಕ್ತಿಯಿಂದ ಕರೆ ಹೋಗಿದೆ. ನಾಪತ್ತೆಯಾಗಿರುವ ಮಗಳನ್ನು ವಾಪಸ್ ಕರೆ ತರಲು ಹಣದ ಅವಶ್ಯಕತೆ ಇದ್ದು, ಕಳುಹಿಸಿದ ಕ್ಯೂಆರ್ ಕೋಡ್‌ಗೆ 8 ಸಾವಿರ ಹಣ ವರ್ಗಾಯಿಸಬೇಕು ಎಂದು ಕರೆ ಮಾಡಿದಾತ ತಿಳಿಸಿದ್ದಾನೆ. ಪೋಲೀಸರ ಸೋಗಿನಲ್ಲಿ ಕರೆ ಮಾಡಿದ್ದಾತನ ಮಾತನ್ನು ನಂಬಿ ಪೋಷಕರು ಹಣವನ್ನು ವರ್ಗಾಯಿಸಿದ್ದಾರೆ. ಇಷ್ಟಾದ ಬಳಿಕ ಕರೆ ಮಾಡಿದಾತ ಮತ್ತೆ ಇವರ ಸಂಪರ್ಕಕ್ಕೆ ಬಂದಿಲ್ಲ. ಆಗ ತಮಗೆ ಮೋಸವಾಗಿದೆ ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತಂಡ ರಚಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಕಾಣೆಯಾದ ತಮ್ಮ ಮಗು ಪತ್ತೆಯಾಗಿದೆ ಎಂದು ಉತ್ತರ ದಿಲ್ಲಿ ಜಿಲ್ಲೆಯ ಪೋಷಕರಿಂದ ನಾವು ಅನೇಕ ಲಿಖಿತ ಮತ್ತು ಮೌಖಿಕ ದೂರುಗಳನ್ನು ಸ್ವೀಕರಿಸಿದ್ದೇವೆ. ಪೊಲೀಸ್ ಸಿಬ್ಬಂದಿ ಎಂದು ಭಾವಿಸಿ ಅವರು ಹಣ ಪಾವತಿಸಿದ್ದಾರೆ. ಆದರೆ, ಹಣ ಸ್ವೀಕರಿಸಿದವರು ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ. ನಮ್ಮ ತನಿಖೆಯ ಸಮಯದಲ್ಲಿ, ಸಾರ್ವಜನಿಕವಾಗಿ ಲಭ್ಯವಿರುವ ಡೇಟಾಬೇಸ್‌ಗಳಿಂದ ಕಾಣೆಯಾದ ಮಕ್ಕಳ ಪೋಷಕರ ಸಂಖ್ಯೆಯನ್ನು ಪಡೆದುಕೊಂಡು ಮತ್ತು ಅವರಿಗೆ ಕರೆ ಮಾಡುವ ಗ್ಯಾಂಗ್ ಬಗ್ಗೆ ನಾವು ಪತ್ತೆ ಹಚ್ಚುತ್ತಿದ್ದೇವೆ ಎಂದು ಎಂದು ಉತ್ತರ ದೆಹಲಿಯ ಉಪ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ಮೀನಾ ಹೇಳಿದರು.

ಈ ಸುದ್ದಿಯನ್ನೂ ಓದಿ: Cyber Crime: ಸಚಿವ ಜಾರ್ಜ್‌ ವಿರುದ್ಧ ಪೋಸ್ಟ್‌ ಮಾಡಿದ್ದ ತೆಲಂಗಾಣ ಬಿಆರ್‌ಎಸ್‌ ಮುಖಂಡನ ಬಂಧನ

Exit mobile version