ಹರ್ಯಾಣದ ರೇವಾರಿ ಜಿಲ್ಲೆಯ ಧರುಹೇರಾ ಎಂಬಲ್ಲಿ ಹನುಮಂತನ ದೇವಸ್ಥಾನವನ್ನು ಕಳ್ಳನೊಬ್ಬ ಕೊಳ್ಳೆ ಹೊಡೆದಿದ್ದಾನೆ (Theft In Hanuman Temple). ದೇಗುಲದಲ್ಲಿದ್ದ ಕಾಣಿಕೆ ಡಬ್ಬವನ್ನು ಒಡೆದು ಅದರಲ್ಲಿದ್ದ ಸುಮಾರು 5 ಸಾವಿರ ರೂಪಾಯಿಯನ್ನು ಕೊಂಡೊಯ್ದಿದ್ದಾನೆ. ಆದರೆ ವಿಶೇಷವೆಂದರೆ ಕಳ್ಳ ಕಾಣಿಕೆ ಡಬ್ಬ ದೋಚುವುದಕ್ಕೂ ಮೊದಲು ದೇವಸ್ಥಾನದಲ್ಲಿ ಗರ್ಭಗುಡಿಯ ಎದುರು ಕುಳಿತು, ಹನುಮಾನ್ ಚಾಲೀಸಾ ಪಠಣ ಮಾಡಿ (Recites Hanuman Chalisa), 10 ರೂಪಾಯಿ ತಪ್ಪು ಕಾಣಿಕೆ ಹಾಕಿದ್ದಾನೆ. ಈ ಸುದ್ದಿ ಇಂಟರ್ನೆಟ್ನಲ್ಲಿ ಸಿಕ್ಕಾಪಟೆ ಸುದ್ದಿಯಾಗುತ್ತಿದೆ.
ಆಂಜನೇಯನ ಮೂರ್ತಿ ಎದುರು ಕುಳಿತು ಕಳ್ಳ ಹನುಮಾನ್ ಚಾಲೀಸಾ ಪಠಿಸಿರುವ ದೃಶ್ಯ ದೇಗುಲದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲ ನಿಮಿಷಗಳ ಕಾಲ ಅವನು ಕಣ್ಣುಮುಚ್ಚಿಕೊಂಡು, ಕೈಮುಗಿದು ಕುಳಿತುಕೊಂಡಿದ್ದ. ಬಳಿಕ ಆಂಜನೇಯನ ಮೂರ್ತಿಯ ಕಾಲ ಬಳಿ 10 ರೂಪಾಯಿಯನ್ನು ಇಟ್ಟ. ನಾನೀಗ ನಿನ್ನ ದೇವಸ್ಥಾನ ದೋಚುತ್ತಿದ್ದೇನೆ, ನನ್ನ ಕ್ಷಮಿಸಿಬಿಡು ಎಂಬ ಅರ್ಥದಲ್ಲಿ ಕೊಟ್ಟ ತಪ್ಪು ಕಾಣಿಕೆ ಅದು. ಬಳಿಕ ಕಾಣಿಕೆ ಡಬ್ಬಕ್ಕೆ ಹಾಕಿದ್ದ ಬೀಗವನ್ನು ಒಡೆದು, ಅದರಲ್ಲಿದ್ದ ಅಷ್ಟೂ ನೋಟುಗಳನ್ನೂ ಕೊಂಡೊಯ್ದಿದ್ದಾನೆ.
ದೇವಸ್ಥಾನದಲ್ಲಿ ಕಳ್ಳತನವಾಗಿದ್ದು ಮರುದಿನ ಬೆಳಗ್ಗೆ ಅಲ್ಲಿನ ಅರ್ಚಕ ಬಂದಾಗಲೇ ಗೊತ್ತಾಗಿದೆ. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಡೀ ದೇವಸ್ಥಾನವನ್ನು ಪರಿಶೀಲನೆ ಮಾಡಿದ್ದಾರೆ. ಬಳಿಕ ಸಿಸಿಟಿವಿ ಫೂಟೇಜ್ ಕೂಡ ವೀಕ್ಷಿಸಿದ್ದಾರೆ. ಕಳ್ಳನ ಗುರುತು ಸಿಕ್ಕಿದ್ದು ಅವನ ಪತ್ತೆ ಕಾರ್ಯ ನಡೆಸಿದ್ದಾರೆ.
ಹನುಮಾನ್ ಚಾಲೀಸಾ ಪಠಣ ಮಾಡಿ, 10 ರೂಪಾಯಿ ಇಟ್ಟ ಕಳ್ಳ