Site icon Vistara News

Narendra Modi:‌ ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್‌ ಅಕ್ಷಯಪಾತ್ರೆ; ನರೇಂದ್ರ ಮೋದಿ ಬಣ್ಣನೆ

Narendra Modi

This budget will give power to every section of the society; Says PM Narendra Modi

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಸತತ ಏಳನೇ ಬಾರಿಗೆ ಬಜೆಟ್‌ (Union Budget) ಮಂಡಿಸಿ ದಾಖಲೆ ಬರೆದಿದ್ದಾರೆ. ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ನಿರ್ಮಾಣ ಸೇರಿ ಹಲವು ಜನಪರ ಘೋಷಣೆಗಳನ್ನು ಮಾಡಿದ್ದಾರೆ. ಇನ್ನು, ಬಜೆಟ್‌ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿಕ್ರಿಯಿಸಿದ್ದು, “ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್‌ ಏಣಿಯಾಗಿದೆ” ಎಂಬುದಾಗಿ ವಿಡಿಯೊ ಸಂದೇಶದ ಮೂಲಕ ಬಣ್ಣಿಸಿದ್ದಾರೆ.

“ದೇಶದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗಿದೆ. ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ನಿರ್ಮಾಣ, ಸಣ್ಣ ಉದ್ಯಮಗಳು, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಅಷ್ಟೇ ಅಲ್ಲ, ಭಾರತವು ಮೂಲ ಸೌಕರ್ಯ ಉತ್ಪಾದಿಸುವಲ್ಲಿ ಜಾಗತಿಕ ಮಳಿಗೆಯಾಗುತ್ತದೆ. ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ಅಷ್ಟರಮಟ್ಟಿಗೆ, ಪ್ರಸಕ್ತ ಸಾಲಿನ ಮುಂಗಡಪತ್ರವು ದೇಶದ ಏಳಿಗೆಯನ್ನು ಪ್ರತಿನಿಧಿಸುತ್ತದೆ” ಎಂಬುದಾಗಿ ಹೇಳಿದ್ದಾರೆ.

ಶಿಕ್ಷಣ, ಕೌಶಲ ವೃದ್ಧಿಗೆ ಆದ್ಯತೆ

ಶಿಕ್ಷಣ ಹಾಗೂ ಕೌಶಲ ವೃದ್ಧಿಯ ದೃಷ್ಟಿಯಿಂದಲೂ ಬಜೆಟ್‌ ಪ್ರಮುಖವಾಗಿದೆ. ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಯಿಂದ ಮಧ್ಯಮ ವರ್ಗದ ಜನರಿಗೆ ಭಾರಿ ಅನುಕೂಲವಾಗಲಿದೆ. ಅವರಿಗೆ ಹೊಸ ಶಕ್ತಿಯೇ ಸಿಗಲಿದೆ. ದಲಿತರು ಹಾಗೂ ಬುಡಕಟ್ಟು ಸಮುದಾಯದವರಿಗೂ ಇದರಿಂದ ಸಹಕಾರಿಯಾಗಲಿದೆ. ಹಣಕಾಸು ನೆರವು ಕೂಡ ಸಿಗುವುದರಿಂದ ದಮನಿತರು ಏಳಿಗೆಯ ಹಾದಿ ಹಿಡಿಯಲು ಸಾಧ್ಯವಾಗಲಿದೆ” ಎಂದು ತಿಳಿಸಿದರು.

ಕಳೆದ 10 ವರ್ಷದಲ್ಲಿ ದೇಶದ 25 ಕೋಟಿ ಬಡವರು ಬಡತನದಿಂದ ಮುಕ್ತರಾಗಿದ್ದಾರೆ. ನವೋದ್ಯಮಗಳಿಗೆ ಆದ್ಯತೆ ನೀಡಿರುವುದು, ಮಹಿಳೆಯರಿಗೂ ಉದ್ಯೋಗಾವಕಾಶ, ಸಣ್ಣ ಉದ್ಯಮಗಳಿಗೆ ಆರ್ಥಿಕ, ಸಾಲದ ನೆರವು ಸೇರಿ ಹತ್ತಾರು ಕ್ರಮಗಳನ್ನು ತೆಗೆದುಕೊಂಡಿರುವ ಕಾರಣ ಹೊಸ ಮಧ್ಯಮ ವರ್ಗದ ಸೃಜನೆಯಾಗಿದೆ. ಈಗ ಮಂಡಿಸಿರುವ ಬಜೆಟ್‌ನಿಂದ ಕೂಡ ಮಧ್ಯಮ ವರ್ಗದವರ ಅನುಕೂಲವಾಗಲಿದೆ” ಎಂದು ಹೇಳಿದರು.

ತೆರಿಗೆದಾರರಿಗೆ ಸಿಹಿ ಸುದ್ದಿ

ತೆರಿಗೆದಾರರಿಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಸಿಹಿ ಸುದ್ದಿ ನೀಡಿದೆ. ಅದರಲ್ಲೂ, ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಿರುವುದು, ಹೊಸ ತೆರಿಗೆಯ ಪದ್ಧತಿಯ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಮಾಡಿರುವ ಕಾರಣ 6-7 ಲಕ್ಷ ರೂ. ಹಾಗೂ 9-10 ಲಕ್ಷ ರೂ. ಆದಾಯ ಪಡೆಯುವವರು ವರ್ಷಕ್ಕೆ 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ.

ಇದನ್ನೂ ಓದಿ: Union Budget 2024: ಹೊಸ ತೆರಿಗೆ ಸ್ಲ್ಯಾಬ್‌ನಿಂದ 17,500 ರೂ. ತೆರಿಗೆ ಉಳಿತಾಯ ಹೇಗೆ? ಇಲ್ಲಿದೆ ಮಾಹಿತಿ

Exit mobile version