ನವದೆಹಲಿ: ಬಿಜೆಪಿ ನಾಯಕರು ಎಂದರೆ ಮುಸ್ಲಿಂ ವಿರೋಧಿಗಳು ಎಂಬ ಭಾವನೆ ಇದೆ. ಬಿಜೆಪಿಯ ಕೆಲವು ನಾಯಕರ ಹೇಳಿಕೆಗಳು ಕೂಡ ಅವರು ಮುಸ್ಲಿಂ ವಿರೋಧಿಗಳು ಎಂಬ ಮಾತಿಗೆ ಪುಷ್ಟಿ ನೀಡುವಂತಿರುತ್ತವೆ. ಇದರ ಬೆನ್ನಲ್ಲೇ, ಮುಸ್ಲಿಂ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಹೊಗಳಿದ್ದಾರೆ. “ಅಮಿತ್ ಶಾ ಅವರನ್ನು ಭೇಟಿಯಾಗುವ ಮುನ್ನ ನಾವು ಅವರ ಬಗ್ಗೆ ಬೇರೆ ರೀತಿಯೇ ತಿಳಿದುಕೊಂಡಿದ್ದೆವು” ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ.
ದೇಶದ ಹಲವೆಡೆ ರಾಮನವಮಿ ಮೆರವಣಿಗೆ ವೇಳೆ ಹಿಂದುಗಳು ಹಾಗೂ ಮುಸ್ಲಿಮರ ಮಧ್ಯೆ ಭಾರಿ ಗಲಾಟೆ ನಡೆದಿರುವ ಬೆನ್ನಲ್ಲೇ ಮಾರ್ಚ್ 4ರ ರಾತ್ರಿ ಅಮಿತ್ ಶಾ ಅವರು ದೆಹಲಿಯಲ್ಲಿ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಜಮೈತ್ ಉಲಾಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹ್ಮೂದ್ ಮದಾನಿ, ಕಾರ್ಯದರ್ಶಿ ನಿಯಾಜ್ ಫಾರೂಕಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಕಮಲ್ ಫಾರೂಕಿ, ಪ್ರೊಫೆಸರ್ ಅಖ್ತಾರುಲ್ ವಾಸೆ ಸೇರಿ ಹಲವು ಮುಖಂಡರನ್ನು ಶಾ ಭೇಟಿಯಾಗಿದ್ದಾರೆ.
ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ನಿಯಾಜ್ ಫಾರೂಕಿ, “ಅಮಿತ್ ಶಾ ಅವರ ರಾಜಕೀಯ ಭಾಷಣಗಳನ್ನು ಕೇಳಿ ನಾವು ಅವರ ಬಗ್ಗೆ ಬೇರೆಯೇ ಅಭಿಪ್ರಾಯ ಇಟ್ಟುಕೊಂಡಿದ್ದೆವು. ಆದರೆ, ಅವರು ಬಿಹಾರ, ಪಶ್ಚಿಮ ಬಂಗಾಳ, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ನಮ್ಮಿಂದ ವಿವರವಾದ ಮಾಹಿತಿ ಪಡೆದರು. ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರು. ಅವರು ನಮ್ಮ ಯಾವ ಅಂಶವನ್ನೂ ತಿರಸ್ಕರಿಸಿಲ್ಲ. ಅಲ್ಲದೆ, ನಾವು ಹೇಳಿದ್ದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು” ಎಂದರು.
“ಬಿಜೆಪಿಯೇತರ ರಾಜ್ಯಗಳಲ್ಲಿ ಹಿಂದುಗಳು ಹಾಗೂ ಮುಸ್ಲಿಮರ ನಡುವಿನ ಸಂಘರ್ಷ, ಮುಸ್ಲಿಮರ ಕುರಿತು ಬಿಜೆಪಿಯ ಕೆಲವು ನಾಯಕರು ನೀಡುತ್ತಿರುವ ಹೇಳಿಕೆಗಳ ಕುರಿತು ಕೂಡ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿದೆವು. ಇಂತಹ ಬೆಳವಣಿಗೆಗಳ ಕುರಿತು ಅವರು ಕೂಡ ಆತಂಕ ವ್ಯಕ್ತಪಡಿಸಿದರು. ಹಾಗೆಯೇ, ಇಂತಹ ವಿಚಾರಗಳ ನಿಯಂತ್ರಣದ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು ಎಂಬುದಾಗಿ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಸಭೆಯು ಸಕಾರಾತ್ಮಕವಾಗಿ ಇತ್ತು” ಎಂದು ಮಾಹಿತಿ ನೀಡಿದರು.
ಸಮಾಜದಲ್ಲಿ ಹದಗೆಡುತ್ತಿರುವ ಶಾಂತಿ ಸೌಹಾರ್ದ ವಾತಾವರಣವನ್ನು ಮತ್ತೆ ಸರಿಪಡಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೂಡ ಕೆಲವು ತಿಂಗಳ ಹಿಂದೆ ಮುಸ್ಲಿಂ ಸಮುದಾಯದ ಪ್ರಮುಖರು, ವಿದ್ವಾಂಸರ ಜತೆ ಮಾತುಕತೆ ನಡೆಸಿದ್ದರು. ದಿಲ್ಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಅಲಿಗಢ ಮುಸ್ಲಿಮ್ ವಿವಿಯ ಮಾಜಿ ಕುಲಪತಿ ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದಿನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ಧಿಕಿ, ಉದ್ಯಮಿ ಸಯೀದ್ ಶೇರ್ವಾನಿ ಹಾಗೂ ಮಾಜಿ ಕೇಂದ್ರ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಅವರನ್ನು ಒಳಗೊಂಡ ತಂಡವನ್ನು ಮೋಹನ್ ಭಾಗವತ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: Amit Shah: ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಗಲಭೆಕೋರರನ್ನು ತಲೆಕೆಳಗಾಗಿ ನೇತು ಹಾಕುತ್ತೇವೆ ಎಂದ ಅಮಿತ್ ಶಾ