Site icon Vistara News

Republic day : ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಈ ಸಲದ ಗಣರಾಜ್ಯೋತ್ಸವ ಪಥಸಂಚಲನ!

republic

ನವ ದೆಹಲಿ: ಭಾರತವು 74ನೇ ಗಣರಾಜ್ಯೋತ್ಸವವನ್ನು 2023 ಜನವರಿ 26ರಂದು ಆಚರಿಸುತ್ತಿದೆ. (Republic day) ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಅಂದಹಾಗೆ ಈ ಸಲ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ ತನಕ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನವು ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. 60,000 ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಈ ಸಲದ ಗಣರಾಜ್ಯೋತ್ಸವ ದಿನಾಚರಣೆಗಳು ನವೀಕೃತ ಸೆಂಟ್ರಲ್‌ ವಿಸ್ತಾದ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರ 32,000 ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಆನ್‌ಲೈನ್‌ ಮಾರಾಟದಲ್ಲಿ ಮೀಸಲಿರಿಸಿದೆ. ಎಲ್ಲ ಅಧಿಕೃತ ಆಹ್ವಾನಗಳೂ ಮೊದಲ ಸಲ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಈ ಸಲದ ಗಣರಾಜ್ಯೋತ್ಸವ ಪಥ ಸಂಚಲನದ ಪ್ರಥಮಗಳ ವಿವರ ಇಲ್ಲಿದೆ. ಜನ್‌ ಭಾಗೀದಾರಿ ಈ ಸಲದ ಥೀಮ್‌ ಆಗಿದೆ. ಅಂದರೆ ಜನ ಸಾಮಾನ್ಯರ ಪಾಲ್ಗೊಳ್ಳುವಿಕೆಗೆ ಪರೇಡ್‌ನಲ್ಲಿ ಆದ್ಯತೆ ನೀಡಲಾಗುವುದು. ತರಕಾರಿ ಮಾರುವವರು, ಸಣ್ಣ ಪುಟ್ಟ ವ್ಯಾಪಾರಿಗಳು, ಕಾರ್ಮಿಕರು, ರಿಕ್ಷಾ ಚಾಲಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಜನವರಿ 26ರಂದು ಶುರುವಾಗುವ ಆಚರಣೆಗಳು ಜನವರಿ 30 ತನಕ ನಡೆಯಲಿವೆ.

ಕರ್ತವ್ಯಪಥದಲ್ಲಿ ಮೊದಲ ಗಣರಾಜ್ಯೋತ್ಸವ ಪಥ ಸಂಚಲನ

ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರು ನಾಮಕರಣ ಮಾಡಿದ ಬಳಿಕ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ.

ಸ್ವದೇಶಿ ಕುಶಾಲತೋಪು: ಇದುವರೆಗೆ ಸಾಂಪ್ರದಾಯಿಕವಾಗಿ 25 ಪೌಂಡರ್‌ ಗನ್‌ಗಳ ಮೂಲಕ 21-ಗನ್‌ ಸಲ್ಯೂಟ್ ಕಾರ್ಯಕ್ರಮ ನಡೆಯುತ್ತಿತ್ತು. ಈಸಲ ಸ್ವದೇಶಿ ೧೦೫ ಎಂಎಂ ಬಂದೂಕುಗಳು ಬಳಕೆಯಾಗಲಿವೆ.

ಮಹಿಳಾ ಅಧಿಕಾರಿಯ ಸಾರಥ್ಯ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ ಡೇರ್‌ ಡೆವಿಲ್ಸ್‌ ಮೋಟಾರ್‌ ಸೈಕಲ್‌ ಸವಾರರ ತಂಡ ಪ್ರದರ್ಶನ ನೀಡಲಿದೆ. ಮೊದಲ ಸಲ ಬಿಎಸ್‌ಎಫ್‌ನ ಒಂಟೆಗಳ ತುಕಡಿಯಲ್ಲಿ ಮಹಿಳಾ ಅಧಿಕಾರಿಗಳೂ ಸಾರಥ್ಯ ವಹಿಸಲಿದ್ದಾರೆ.

9 ರಾಫೆಲ್‌ ಯುದ್ಧ ವಿಮಾನಗಳ ಪ್ರದರ್ಶನ

ಮೊದಲ ಬಾರಿಗೆ 9 ರಾಫೆಲ್‌ ಯುದ್ಧ ವಿಮಾನಗಳು ವೈಮಾನಿಕ ಪ್ರದರ್ಶನ ನಡೆಸಲಿವೆ. ನೌಕಾ ಪಡೆಯ IL-38 ಸಮರ ವಿಮಾನ ಕಾಣಿಸಿಕೊಳ್ಳಲಿದೆ.

3,500 ಡ್ರೋನ್ ಶೋ

ಗಣರಾಜ್ಯೋತ್ಸವ ಸಂದರ್ಭ 3,500 ದೇಶೀಯ ಡ್ರೋನ್‌ಗಳ ಶೋ ನಡೆಯಲಿದೆ. 3ಡಿ ಅನಾಮೋರ್ಫಿಕ್‌ ಪ್ರಾಜೆಕ್ಷನ್‌ (Anamorphic projection) ನಡೆಯಲಿದೆ.

ಮಿಲಿಟರಿ ಟ್ಯಾಟೂ, ಬುಡಕಟ್ಟು ನೃತ್ಯ

ಮೊಟ್ಟ ಮೊದಲ ಬಾರಿಗೆ ಮಿಲಿಟರಿ ಟ್ಯಾಟೂ ಎಂಬ ಸಶಸ್ತ್ರ ಪಡೆಯ ನೃತ್ಯ, ಸಂಗೀತ ಪ್ರದರ್ಶನ ನಡೆಯಲಿದೆ. ದಿಲ್ಲಿಯ ಜವಹರಲಾಲ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ಬುಡಕಟ್ಟು ನೃತ್ಯ ಕೂಡ ಮನರಂಜಿಸಲಿದೆ.

Exit mobile version