ನವದೆಹಲಿ: ಈ ಹಿಂದೆ ಮಹಿಳಾ ಮೀಸಲಾತಿ ವಿಧೇಯಕವನ್ನು (Women’s Reservation Bill) ವಿರೋಧಿಸಿದ್ದ ಮತ್ತು ಮೂರು ದಶಕಗಳಿಂದ ಬಾಕಿ ಉಳಿಸಿಕೊಂಡಿದ್ದ ರಾಜಕೀಯ ಪಕ್ಷಗಳು ಈಗ ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆಯ ಮತಗಳಿಂದ ವಿಧೇಯಕ ಅಂಗೀಕಾರವಾಗಿರುವುದನ್ನು ಕಂಡು ಭೀತಿಗೆ ಒಳಗಾಗಿ ನಡುಗುತ್ತಿವೆ ಎಂದು ಪ್ರಧಾನಿ ನರೇಂದ್ರ (PM Narendra Modi) ಮೋದಿ ಶನಿವಾರ ಹೇಳಿದ್ದಾರೆ.
ವಾರಣಾಸಿಯ (ಕಾಶಿ) ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ನಾರಿ ಶಕ್ತಿ ವಂದನ ಕಾರ್ಯಕ್ರಮದಲ್ಲಿ 5,000 ಮಹಿಳೆಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು “ಕಳೆದ ಮೂರು ದಶಕಗಳಿಂದ ಈ ವಿಧೇಯಕ ಬಾಕಿ ಉಳಿದಿತ್ತು. ಆದರೆ ಸಂಸತ್ತಿನ ಉಭಯ ಸದನಗಳಲ್ಲಿ ತಾಯಂದಿರು ಮತ್ತು ಸಹೋದರಿಯರ ಏಕತೆ ಮತ್ತು ಶಕ್ತಿಯಿಂದಾಗಿ ಅದು ಅಂಗೀಕಾರಗೊಂಡಿದೆ. ಇದೇ ವೇಳೆ ವಿಧೇಯಕವನ್ನು ಸತತವಾಗಿ ವಿರೋಧಿಸಿದ್ದ ರಾಜಕೀಯ ಪಕ್ಷಗಳು ಅನಿವಾರ್ಯವಾಗಿ ಬೆಂಬಲಕ್ಕೆ ನಿಂತತು. ಆ ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರ ಬಗ್ಗೆ ಹೆದರುತ್ತಿವೆ. ಅವರು ನಡುಗುತ್ತಿದ್ದಾರೆ. ಹೀಗಾಗಿ ವಿಧೇಯಕವನ್ನು ಬೆಂಬಲಿಸಿದರು ಮತ್ತು ಅದನ್ನು ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆಯ ಮತಗಳಿಂದ ಅಂಗೀಕರಿಸಿದರು ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಿದ ಬಳಿಕ ಕಾಶಿಗೆ ಬಂದಿರುವದು ಅದೃಷ್ಟದ ವಿಷಯ ಎಂಬುದಾಗಿಯೂ ಇದೇ ವೇಳೆ ಮೋದಿ ಹೇಳಿದರು.
ಕಾಶಿಯಲ್ಲಿ ಮಾತೃಶಕ್ತಿಯ ವೈಭವ
ಕಾಶಿ ನಗರ ತಾಯಿ ಕೂಷ್ಮಾಂಡ, ತಾಯಿ ಶೃಂಗಾರ ಗೌರಿ, ತಾಯಿ ಅನ್ನಪೂರ್ಣ ಮತ್ತು ತಾಯಿ ಗಂಗಾ ಇರುವ ಪವಿತ್ರ ನಗರ. ಮಾತೃಶಕ್ತಿಯ ವೈಭವವು ಈ ಸ್ಥಳದ ಪ್ರತಿಯೊಂದು ಭಾಗಕ್ಕೂ ಅಂಟಿಕೊಂಡಿದೆ. ವಿಂಧ್ಯಾವಾಸಿನಿ ದೇವಿ ಕೂಡ ಬನಾರಸ್ ನಿಂದ ಬಹಳ ದೂರದಲ್ಲಿಲ್ಲ. ಅಹಲ್ಯಾಬಾಯಿ ಹೋಳ್ಕರ್ ಅವರ ಸತ್ಕಾರ್ಯಗಳಿಗೆ ಕಾಶಿ ನಗರವು ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ : Women’s Reservation Bill: ಮೋದಿಯವರ ಮಹಿಳಾ ಮೀಸಲಾತಿ 2024, 2029, 2034ರಲ್ಲೂ ಜಾರಿಯಾಗಲ್ಲ: ಸಿದ್ದರಾಮಯ್ಯ
ಮಹಾದೇವನಿಗಿಂತ ಮೊದಲು ತಾಯಿ ಪಾರ್ವತಿ ಮತ್ತು ಗಂಗೆಯನ್ನು ಪೂಜಿಸುವ ಜನರು ನಾವು. ನಮ್ಮ ಕಾಶಿ ರಾಣಿ ಲಕ್ಷ್ಮಿಬಾಯಿಯಂತವರ ಜನ್ಮಸ್ಥಳವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷ್ಮಿಬಾಯಿಯಂತಹ ರಾಣಿಯಿಂದ ಹಿಡಿದು ಮಿಷನ್ ಚಂದ್ರಯಾನವನ್ನು ಮುನ್ನಡೆಸಿದ ಮಹಿಳಾ ವಿಜ್ಞಾನಿಗಳವರೆಗೆ ನಾವು ಪ್ರತಿ ಅವಧಿಯಲ್ಲೂ ಮಹಿಳಾ ನಾಯಕತ್ವದ ಶಕ್ತಿಯನ್ನು ಸಾಬೀತುಪಡಿಸಿದ್ದೇವೆ ಎಂದು ಮೋದಿ ಅವರು ಹೇಳಿದರು. ನಾರಿ ಶಕ್ತಿ ವಂದನ ಕಾಯ್ದೆಯು ವಿಶಾಲ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ನುಡಿದರು.
ಮಹಿಳೆಯರ ಸಬಲೀಕರಣ
ಮಹಿಳೆಯರು ಸಾಧನೆಗೆ ಯಾರ ಸಹಾಯ ಅಗತ್ಯವಿಲ್ಲದಂತಹ ವ್ಯವಸ್ಥೆಯನ್ನು ರಚಿಸಲು ನಾವು ಬಯಸುತ್ತೇವೆ. ಇದಕ್ಕಾಗಿ, ಕಾನೂನಿನ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವುದು ಅವಶ್ಯಕ. ಆದ್ದರಿಂದ, ಈ ಕಾನೂನನ್ನು ನಾರಿ ಶಕ್ತಿ ವಂದನ್ ಕಾಯ್ದೆ ಎಂದು ಹೆಸರಿಸಿದ್ದೇವೆ. ಕೆಲವು ಜನರಿಗೆ ಇದರಲ್ಲಿಯೂ ವಂದನ್ ಎಂಬ ಪದದೊಂದಿಗೆ ಸಮಸ್ಯೆಗಳಿವೆ. ನಾವು ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಪೂಜಿಸದಿದ್ದರೆ ಇನ್ನೇನು ಮಾಡಬಹುದು? ಮಹಿಳಾ ಶಕ್ತಿಯನ್ನು ಪೂಜಿಸುವುದರ ಅರ್ಥವೇನೆಂದು ಈ ಜನರಿಗೆ ಅರ್ಥವಾಗುವುದಿಲ್ಲ. ಇಂತಹ ನಕಾರಾತ್ಮಕ ಚಿಂತನೆಯನ್ನು ತಪ್ಪಿಸುವ ಮೂಲಕ ನಾವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕು ಎಂಬುದಾಗಿ ಮೋದಿ ಹೇಳಿದರು.
ನಾರಿ ಶಕ್ತಿ ವಂದನ್ ಅಧಿನಿಯಮ್ ಕಾನೂನು “ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ” ಎಂದು ಮೋದಿ ಹೇಳಿದರು.
ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ
ಇಲ್ಲಿನ ಗಂಜಾರಿ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ತಮ್ಮ ಸರ್ಕಾರ ದೇಶದ ದೂರದ ಪ್ರದೇಶಗಳು ಸೇರಿದಂತೆ ಪ್ರತಿಯೊಂದು ಮೂಲೆಯಲ್ಲೂ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.
1,115 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 16 ಅಟಲ್ ಅವಸಿಯಾ ವಿದ್ಯಾಲಯಗಳನ್ನು (ವಸತಿ ಶಾಲೆಗಳು) ಮೋದಿ ಉದ್ಘಾಟಿಸಿದರು. ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.