ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ಇದರೊಂದಿಗೆ ಕೋಟ್ಯಂತರ ಹಿಂದುಗಳ ಕನಸು ನನಸಾದಂತಾಗಿದೆ. ಇದರ ಬೆನ್ನಲ್ಲೇ, ಮಂಗಳವಾರದಿಂದ (ಜನವರಿ 23) ಭಕ್ತರು ರಾಮಲಲ್ಲಾನ ದರ್ಶನ ಮಾಡಲು ಅವಕಾಶ ನೀಡಲಾಗಿದ್ದು, ಮಂಗಳವಾರ ಬೆಳಗ್ಗೆಯೇ ರಾಮಮಂದಿರದಲ್ಲಿ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತಿದ್ದಾರೆ. ಸೋಮವಾರ (ಜನವರಿ 22) ದರ್ಶನ ಮಾಡಲು ಅವಕಾಶ ಇರದ ಕಾರಣ ಮಂಗಳವಾರ ಬೆಳಗ್ಗೆಯೇ ಸಾವಿರಾರು ಭಕ್ತರು (Devotees) ರಾಮನ ದರ್ಶನಕ್ಕಾಗಿ ಕಾದು ನಿಂತಿದ್ದಾರೆ.
ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದಲೇ ರಾಮನ ದರ್ಶನಕ್ಕಾಗಿ ಸಾವಿರಾರು ಭಕ್ತರು ಜಮಾಯಿಸಿದ್ದಾರೆ. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರಾಮನ ದರ್ಶನಕ್ಕಾಗಿ ಹಾತೊರೆಯುತ್ತಿದ್ದಾರೆ. ರಾಮಮಂದಿರದ ಗೇಟ್‌ಗಳ ಎದುರು ಸಾವಿರಾರು ಭಕ್ತರು ಕಾದು ನಿಂತಿರುವ ವಿಡಿಯೊ ಕೂಡ ಲಭ್ಯವಾಗಿದೆ. ಜನವರಿ 23ರಿಂದ ಬೆಳಗ್ಗೆ 7 ಗಂಟೆಯಿಂದ 11.30 ಹಾಗೂ ಮಧ್ಯಾಹ್ನ 2 ಗಂಟೆಯಿಂದ 7 ಗಂಟೆವರೆಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾಮಮಂದಿರ ಲೋಕಾರ್ಪಣೆಯಾದ ಕಾರಣ ಕೋಟ್ಯಂತರ ಜನ ಅಯೋಧ್ಯೆಗೆ ತೆರಳುವ ನಿರೀಕ್ಷೆ ಇದೆ.
#WATCH | Ayodhya, Uttar Pradesh: Devotees gather in large numbers at Shri Ram temple on the first day after the Pran Pratishtha ceremony pic.twitter.com/EGo9yr9sXS
— ANI (@ANI) January 23, 2024
ರಾಮ ನಿತ್ಯ ನಿರಂತರ ಎಂದ ಮೋದಿ
ರಾಮಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ, ಭಗವಾನ್ ಶ್ರೀರಾಮನು ನಿತ್ಯ ನಿರಂತರ ಎಂದು ಬಣ್ಣಿಸಿದರು. “ರಾಮ ವಿವಾದ ಅಲ್ಲ, ಸಮಾಧಾನ. ರಾಮ ವರ್ತಮಾನ ಅಲ್ಲ ಅನಂತ ಕಾಲ. ರಾಮ ಎಲ್ಲರಿಗೂ ಸೇರಿದವನು. ಇದು ಕೇವಲ ವಿಗ್ರಹದ ಪ್ರಾಣ ಪ್ರತಿಷ್ಠೆ ಅಲ್ಲ. ಸಾಕ್ಷಾತ್ ಭಾರತೀಯರ ಮಾನವೀಯ ಮೌಲ್ಯದ, ಸರ್ವೋಚ್ಚ ಆದರ್ಶದ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಇದು ಕೇವಲ ದೇವ ಮಂದಿರ ಅಲ್ಲ, ಭಾರತದ ದೃಷ್ಟಿಯ, ಭಾರತದ ದರ್ಶನದ ಮಂದಿರ. ರಾಷ್ಟ್ರ ಚೇತನ ಮಂದಿರ.ರಾಮ ಪ್ರವಾಹ, ಪ್ರಭಾವ. ರಾಮ ನಿತ್ಯ ನಿರಂತರ. ರಾಮ ವಿಶ್ವಾತ್ಮ. ಕಾಲ ಚಕ್ರ ಬದಲಾಗಿದೆ. ಮುಂದಿನ ಸಾವಿರ ಸಾವಿರ ವರ್ಷಗಳ ಕಾಲ ಈ ಸಂಭ್ರಮ ಮುಂದುವರಿಯಲಿದೆ. ಇದು ಸರಿಯಾದ ಸಮಯ. ಇದು ಪವಿತ್ರ ಸಮಯ. ಮುಂದಿನ ಸಾವಿರ ವರ್ಷಗಳ ಭವಿಷ್ಯಕ್ಕೆ ನಾವೀಗ ಮುನ್ನುಡಿ ಬರೆಯಬೇಕು. ಭವ್ಯ ದಿವ್ಯ ಭಾರತದ ನಿರ್ಮಾಣಕ್ಕೆ ಪ್ರಮಾಣ ತೆಗೆದುಕೊಳ್ಳಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ: Ram Mandir: ಇದು ರಾಮಮಂದಿರ ಅಷ್ಟೇ ಅಲ್ಲ, ರಾಷ್ಟ್ರಮಂದಿರ: ಪ್ರಾಣ ಪ್ರತಿಷ್ಠೆ ಬಳಿಕ ಮೋದಿ ಭಾವುಕ ನುಡಿ
11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ ಗಿಫ್ಟ್
ಸೂರತ್‌ನಲ್ಲಿ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕರಾಗಿರುವ, ರಾಮನ ಮೇಲೆ ಅಪಾರ ನಂಬಿಕೆ ಇಟ್ಟಿರುವ ಮುಕೇಶ್ ಪಟೇಲ್ ಕುಟುಂಬಸ್ಥರು 11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಕೊಡುಗೆಯಾಗಿ ಕೊಟ್ಟು ರಾಮನ ಮೇಲಿನ ಭಕ್ತಿ ಮೆರೆದಿದ್ದಾರೆ. ಚಿನ್ನ, ಮುತ್ತುಗಳು ಹಾಗೂ ವಜ್ರಗಳಿಂದ ಉತ್ತರ ಭಾರತ ಶೈಲಿಯಲ್ಲಿ ಕಿರೀಟವನ್ನು ತಯಾರಿಸಲಾಗಿದೆ. ಮುಕೇಶ್ ಪಟೇಲ್ ಅವರ ಕಂಪನಿಯ ಇಬ್ಬರು ಉದ್ಯೋಗಿಗಳು ಅಯೋಧ್ಯೆಗೆ ಬಂದು, ರಾಮಲಲ್ಲಾ ಮೂರ್ತಿಯ ಅಳತೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಕಿರೀಟವನ್ನು ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ