ಲಖನೌ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕೇವಲ 14 ದಿನದ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಮೂರೂ ಭ್ರೂಣಗಳನ್ನು ಬನಾರಸ್ ಹಿಂದು ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ. ಮಗು ಈಗ ಆರೋಗ್ಯದಿಂದ ಇದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇದರಿಂದಾಗಿ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ ಎಂದೂ ತಿಳಿದುಬಂದಿದೆ.
ಹೆಣ್ಣುಮಗು ಹುಟ್ಟಿದಾಗ ಎಲ್ಲರಂತೆಯೇ ಸಾಮಾನ್ಯವಾಗಿತ್ತು. ಆದರೆ, ದಿನ ಕಳೆದಂತೆ ಹೊಟ್ಟೆಯಲ್ಲಿ ಊತ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಯಿತು. ಹುಟ್ಟಿದ ಮಗು 14 ದಿನ ಕಳೆಯುವಷ್ಟರಲ್ಲಿ ತುಂಬ ತೊಂದರೆ ಅನುಭವಿಸುವಂತಾಯಿತು. ಮಗುವಿನ ಪೋಷಕರು ಕೂಡಲೇ ಸರ್ ಸುಂದರ್‌ಲಾಲ್ ಆಸ್ಪತ್ರೆಗೆ ದಾಖಲಿಸಿದರು. ಆಗ ವೈದ್ಯರಿಗೇ ಅಚ್ಚರಿ ಕಾದಿತ್ತು.
ಆಸ್ಪತ್ರೆಗೆ ದಾಖಲಾದ ಮಗುವನ್ನು ಸ್ಕ್ಯಾನ್ ಮಾಡಿದಾಗ, ಅದರ ಹೊಟ್ಟೆಯಲ್ಲಿ ಮೂರು ಭ್ರೂಣ ಇರುವುದು ಪತ್ತೆಯಾಗಿದೆ. “ಮಗುವಿನ ಎಕ್ಸ್‌ರೇ ರಿಪೋರ್ಟ್ ನೋಡಿದಾಗ ನಮಗೇ ಅಚ್ಚರಿಯಾಯಿತು. ಮೂರು ಭ್ರೂಣಗಳನ್ನು ಕಂಡು ಗಾಬರಿ ಆಯಿತು. ಕೂಡಲೇ ನಮ್ಮ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮೂರು ಭ್ರೂಣಗಳನ್ನು ಹೊರತೆಗೆದಿದೆ. ಮಗು ಈಗ ಆರೋಗ್ಯದಿಂದ ಇದೆ” ಎಂದು ಆಪರೇಷನ್ ಮಾಡಿದ ವೈದ್ಯರ ತಂಡದ ರುಚಿರಾ ಮಾಹಿತಿ ನೀಡಿದರು. ವೈದ್ಯರಾದ ರುಚಿರಾ, ಗ್ರೀಷ್ಮಾ, ಅಮೃತಾ ಹಾಗೂ ಚೇತನ್ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಹೆಣ್ಣುಮಗುವು ತಾಯಿಯ ಹೊಟ್ಟೆಯಲ್ಲಿಯೇ ಸಮಸ್ಯೆ ಎದುರಿಸಿದೆ. ತಾಯಿಯ ಹೊಟ್ಟೆಯಲ್ಲಿದ್ದ ಮೂರು ಭ್ರೂಣಗಳು ದಿನ ಮಗುವಿನ ಹೊಟ್ಟೆ ಸೇರಿವೆ ಎಂದು ತಿಳಿದುಬಂದಿದೆ. ಹುಟ್ಟುವ ಐದು ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಇಂತಹ ಸಮಸ್ಯೆ ಕಾಡುತ್ತದೆ ಎನ್ನಲಾಗಿದೆ. ಸತತ ಮೂರು ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ಕೈಗೊಂಡು ಭ್ರೂಣಗಳನ್ನು ಹೊರತೆಗೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ವೈರಲ್ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!