Site icon Vistara News

Terrorists Attack: ಕಾಶ್ಮೀರದಲ್ಲಿ ಮೂವರು ಹಿಂದುಗಳ ಮೇಲೆ ಗುಂಡಿನ ದಾಳಿ, ಉಗ್ರರ ಪತ್ತೆಗೆ ತೀವ್ರ ಶೋಧ

Terrorists Attack In Jammu Kashmir

Three labourers from Bihar shot at by terrorists in Jammu Kashmir

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಸೇರಿ ಹಿಂದುಗಳನ್ನು ಗುರಿಯಾಗಿಸಿ ದಾಳಿ ಮುಂದುವರಿದಿದೆ. ಶೋಪಿಯಾನ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಉಗ್ರರು ಬಿಹಾರದ ಮೂವರು ಕಾರ್ಮಿಕರ ಮೇಲೆ ಗುಂಡಿನ ದಾಳಿ (Terrorists Attack) ನಡೆಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನ್ಮೋಲ್‌ ಕುಮಾರ್‌, ಪಿಂಟು ಕುಮಾರ್‌ ಠಾಕೂರ್‌ ಹಾಗೂ ಹೀರಾಲಾಲ್‌ ಯಾದವ್‌ ಗುಂಡಿನ ದಾಳಿಗೆ ಒಳಗಾದವರು. ಇವರು ಬಿಹಾರದ ಸುಪೌಲ್‌ ಜಿಲ್ಲೆಯ ನಿವಾಸಿಗಳಾಗಿದ್ದು, ಕೆಲಸ ಹುಡುಕಿಕೊಂಡು ಬಂದು ಕಾಶ್ಮೀರದಲ್ಲಿ ನೆಲೆಸಿದ್ದರು. ಕೆಲ ದಿನಗಳಿಂದ ಕಾರ್ಮಿಕರ ಮೇಲೆ ನಿಗಾ ಇರಿಸಿದ್ದ ಉಗ್ರರು, ಶುಕ್ರವಾರ ರಾತ್ರಿ ಗಾಗ್ರನ್‌ ಪ್ರದೇಶದಲ್ಲಿ ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

“ಶೋಪಿಯಾನ್‌ ಹೊರವಲಯದಲ್ಲಿ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್‌ ಮೂವರು ಕಾರ್ಮಿಕರು ಪಾರಾಗಿದ್ದಾರೆ. ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಾದ ಬಳಿಕ ಗಾಗ್ರನ್‌ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯು ಸುತ್ತುವರಿದು, ಶೋಧ ನಡೆಸಿದ್ದಾರೆ” ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Rajouri Encounter: ರಾಜೌರಿಯಲ್ಲಿ ಉಗ್ರರ ದಾಳಿಗೆ ಮೃತಪಟ್ಟ ಯೋಧರ ಸಂಖ್ಯೆ 5ಕ್ಕೆ ಏರಿಕೆ

“ನಾವು ಬಿಹಾರದಿಂದ ಇಲ್ಲಿಗೆ ಬಂದು ನೆಲೆಸಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನನ್ನ ಸಹೋದರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ” ಎಂದು ಗುಂಡಿನ ದಾಳಿಗೀಡಾದ ವ್ಯಕ್ತಿಯ ಸಂಬಂಧಿಕರೊಬ್ಬರು ಸುದ್ದಿಗಾರರಿಗೆ ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು, ಹಿಂದುಗಳು ಹಾಗೂ ಬೇರೆ ರಾಜ್ಯಗಳಿಂದ ಬಂದು ನೆಲೆಸಿರುವವರನ್ನು ಗುರಿಯಾಗಿಸಿ ಇತ್ತೀಚೆಗೆ ಉಗ್ರರು ದಾಳಿ ನಡೆಸುತ್ತಿದ್ದಾರೆ. ಹಾಗಾಗಿಯೇ, ನಮಗೆ ರಕ್ಷಣೆ ಒದಗಿಸಬೇಕು ಎಂದು ಕಾಶ್ಮೀರಿ ಪಂಡಿತರು ಈಗಾಗಲೇ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.

Exit mobile version