Site icon Vistara News

Kids Found Dead: ಆಟವಾಡಲು ಡಕೋಟಾ ಕಾರು ಹೊಕ್ಕ ಮೂವರು ಚಿಣ್ಣರು, ಹೊರಬರಲು ಆಗದೆ ಉಸಿರುಗಟ್ಟಿ ಸಾವು

Three Children Found Dead In Maharashtra

Three missing kids found dead inside car in Maharashtra

ಮುಂಬೈ: ಮಹಾರಾಷ್ಟ್ರದ ನಾಗ್ಪುರದಲ್ಲಿ ಶನಿವಾರ ನಾಪತ್ತೆಯಾಗಿದ್ದ ಮೂವರು ಚಿಣ್ಣರ ಶವಗಳು (Kids Found Dead) ಕಾರಿನಲ್ಲಿ ಪತ್ತೆಯಾಗಿವೆ. ನಾಗ್ಪುರದ ಫಾರೂಖ್‌ ನಗರದಲ್ಲಿ ಶನಿವಾರವೇ ಮೂವರು ಮಕ್ಕಳು ಆಟವಾಡಲು ಹೋಗಿ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಮೂವರೂ ಮಕ್ಕಳ ಪತ್ತೆಗಾಗಿ ಸುಮಾರು 200ಕ್ಕೂ ಅಧಿಕ ಪೊಲೀಸರು ಸತತ ಹುಡುಕಾಟ ನಡೆಸಿದ್ದರು. ಸಿಟಿಟಿವಿ ಪರಿಶೀಲನೆ ಮೂಲಕ ಪತ್ತೆಹಚ್ಚಲು ಯತ್ನಿಸಿದ್ದರು. ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಪೋಷಕರು ಪ್ರಾರ್ಥನೆ ಮಾಡಿದ್ದರು. ಆದರೆ, ಮೂರೂ ಮುದ್ದಾದ ಮಕ್ಕಳ ಶವವು ಹಳೆಯ ಕಾರಿನಲ್ಲಿ ಪತ್ತೆಯಾಗಿವೆ.

ಮೂರೂ ಮಕ್ಕಳು ನಾಲ್ಕರಿಂದ ಆರು ವರ್ಷದೊಳಗಿನವರಾಗಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮೃತರನ್ನು ತೌಫಿಕ್‌ ಫಿರೋಜ್‌ ಖಾನ್‌ (4), ಆಲಿಯಾ ಫಿರೋಜ್‌ ಖಾನ್‌ (6) ಹಾಗೂ ಅಫ್ರೀನ್‌ ಇರ್ಷಾದ್‌ ಎಂದು ಗುರುತಿಸಲಾಗಿದೆ. ತೌಫಿಕ್‌ ಹಾಗೂ ಆಲಿಯಾ ಅಣ್ಣ-ತಂಗಿ ಆಗಿದ್ದು, ಅಫ್ರೀನ್‌ ಇರ್ಷಾದ್‌ ಕಸಿನ್‌ ಬ್ರದರ್‌ ಆಗಿದ್ದಾನೆ. ಮಕ್ಕಳ ಪೋಷಕರು ಉತ್ತರ ಪ್ರದೇಶದ ಮೂಲದವರಾಗಿದ್ದು, ದುಡಿಯಲು ನಾಗ್ಪುರಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಆಟವಾಡಲು ಹೋಗಿ ಮೃತಪಟ್ಟ ಮಕ್ಕಳು

ಶನಿವಾರ ಮಧ್ಯಾಹ್ನ ಮೂವರೂ ಮಕ್ಕಳು ಆಟವಾಡಲು ಹೋಗಿ ನಾಪತ್ತೆಯಾದ ಪ್ರಕರಣವು ಗಂಭೀರ ಸ್ವರೂಪ ಪಡೆದಿತ್ತು. ಇವರನ್ನು ಅಪಹರಣ ಮಾಡಲಾಗಿದೆ, ಮಕ್ಕಳ ಕಳ್ಳಸಾಗಣೆ ಜಾಲವು ಅಪರಾಧ ಎಸಗಿರಬಹುದು ಎಂಬ ಶಂಕೆ ಮೂಡಿತ್ತು. ಹಾಗಾಗಿಯೇ, ತೀವ್ರ ಸ್ವರೂಪದಲ್ಲಿ ಮಕ್ಕಳ ಪತ್ತೆಗಾಗಿ ಶೋಧ ನಡೆಯುತ್ತಿತ್ತು. ಆದರೆ, ಮಕ್ಕಳು ಆಟವಾಡಲು ಹೋಗಿ ಕಾರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಪ್ಪನ ದಿನವೇ ದುರಂತ; ಮಕ್ಕಳಿಬ್ಬರನ್ನು ಕೂಸುಮರಿಯಂತೆ ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ

ಮೂವರೂ ಮಕ್ಕಳು ಆಟವಾಡುತ್ತ ಕಾರಿನ ಒಳಗೆ ಹೋಗಿದ್ದಾರೆ. ಕಾರಿನ ಒಳಗೆ ಹೋಗಿ ಬಾಗಿಲು ಮುಚ್ಚಿಕೊಂಡಾಗ ಬಾಗಿಲುಗಳು ಲಾಕ್‌ ಆಗಿವೆ. ಇದಾದ ಬಳಿಕ ಅವರು ಎಷ್ಟು ಕೂಗಿದರೂ ಬೇರೆ ಯಾರಿಗೂ ಕೇಳಿಸಿಲ್ಲ. ಹಳೆಯ ಕಾರಾದ ಕಾರಣ ಯಾರೂ ಕಾರಿನ ಹತ್ತಿರ ಸುಳಿದಿಲ್ಲ. ಕಾರಿನ ಗಾಜನ್ನು ಬಡಿದ ಕಾರಣ ಗಾಜಿನ ಮೇಲೆ ಅವರ ಕೈಗಳ ಗುರುತಿವೆ. ಹೀಗೆ, ಎಷ್ಟು ಕಿರುಚಿದರೂ, ಗಾಜು ಬಡಿದರೂ ಯಾರೂ ಬರದ ಕಾರಣ ಅವರು ಉಸಿರುಗಟ್ಟಿ, ಸೆಕೆ ತಾಳದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

Exit mobile version