ರಾಯ್‌ಪುರ: ಪ್ರಸಕ್ತ ವರ್ಷಾರಂಭದಿಂದಲೂ ನಕ್ಸಲರ ವಿರುದ್ಧ ಸಮರ ಸಾರಿರುವ ಭದ್ರತಾ ಸಿಬ್ಬಂದಿಯು ಛತ್ತೀಸ್‌ಗಢ ಹಾಗೂ ತೆಲಂಗಾಣದ ಗಡಿಯಲ್ಲಿ ಶನಿವಾರ (ಏಪ್ರಿಲ್ 6) ಮತ್ತೆ ಮೂವರು ನಕ್ಸಲರನ್ನು (Naxals Killed) ಹೊಡೆದುರುಳಿಸಿದ್ದಾರೆ. ಛತ್ತೀಸ್‌ಗಢದ (Chhattisgarh) ಪೂಜಾರಿ ಕಾಂಕೇರ್‌ನಲ್ಲಿ (Kanker Encounter) ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಮಾವೋವಾದಿಗಳನ್ನು ಹತ್ಯೆಗೈದಿದ್ದಾರೆ. ಇದರೊಂದಿಗೆ ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿಯು 49 ನಕ್ಸಲರನ್ನು ಹತ್ಯೆ ಮಾಡಿದಂತಾಗಿದೆ.
Chhattisgarh | Three Naxalites were killed in an Anti-Naxal operation led by Telangana's Greyhounds with auxiliary support of Chhattisgarh Police in the Karriguta forests of Pujari Kanker on the Telangana-Chhattisgarh border. Bodies of the Naxalites and weapons were recovered…
— ANI (@ANI) April 6, 2024
ಛತ್ತೀಸ್‌ಗಢ ಹಾಗೂ ತೆಲಂಗಾಣದ ಗಡಿಯಲ್ಲಿ ನಕ್ಸಲರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಮಾವೋವಾದಿಗಳು ಕೂಡ ಪ್ರತಿದಾಳಿ ನಡೆಸಿದ ಕಾರಣ ಗುಂಡಿನ ಚಕಮಕಿ ನಡೆದಿದೆ. ಇದೇ ಸಂದರ್ಭದಲ್ಲಿ ಮುನ್ನಡೆ ಸಾಧಿಸಿದ ಭದ್ರತಾ ಸಿಬ್ಬಂದಿಯು ಮೂವರನ್ನು ಹೊಡೆದುರುಳಿಸಿದ್ದಾರೆ. ಹತ ನಕ್ಸಲರಿಂದ ಐಇಡಿ, ಬಂದೂಕು ಸೇರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
13 ನಕ್ಸಲರ ಹತ್ಯೆ
ಏಪ್ರಿಲ್ 2ರಂದು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ 13 ಮಂದಿ ನಕ್ಸಲರು ಹತರಾಗಿದ್ದರು. ಕಳೆದ ಮಂಗಳವಾರ ಬೆಳಗ್ಗೆ ಬಿಜಾಪುರ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಮತ್ತು ಛತ್ತೀಸ್‌ಗಢ ಪೊಲೀಸರ ಭದ್ರತಾ ಪಡೆಗಳೊಂದಿಗಿನ ಭೀಕರ ಗುಂಡಿನ ಚಕಮಕಿಯಲ್ಲಿ 13 ಮಂದಿ ನಕ್ಸಲರು ಹತರಾಗಿದ್ದರು. ಇದು 2024ರಲ್ಲಿ ನಡೆದ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆ ಎನಿಸಿದೆ.
4 ತಿಂಗಳಲ್ಲಿ 49 ನಕ್ಸಲರ ಖತಂ
ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲರ ವಿರುದ್ಧ ಭಾರಿ ಸಮರ ಸಾರಿದ್ದಾರೆ. ಶನಿವಾರ ಹತ್ಯೆಗೈದ ಮೂವರು ನಕ್ಸಲರು ಸೇರಿ ಪ್ರಸಕ್ತ ವರ್ಷದ ನಾಲ್ಕು ತಿಂಗಳಲ್ಲಿ 49 ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದಾರೆ. 2023ರಲ್ಲಿ ಭದ್ರತಾ ಸಿಬ್ಬಂದಿಯು 22 ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಕಾರಣ ತೆಲಂಗಾಣ ಗಡಿ ಹಾಗೂ ಛತ್ತೀಸ್‌ಗಢದ ಸುಕ್ಮಾ, ಬಿಜಾಪುರ ಸೇರಿ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿ ಇರುತ್ತದೆ. ಹಾಗಾಗಿ, ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Maoists Killed: ಛತ್ತೀಸ್‌ಗಢದಲ್ಲಿ ಇಬ್ಬರು ನಕ್ಸಲರ ಹತ್ಯೆ; ಚುನಾವಣೆ ಮೊದಲೇ ಭರ್ಜರಿ ಬೇಟೆ