ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ((Anantnag Encounter)) ನಾಲ್ವರು ಯೋಧರು ಹುತಾತ್ಮರಾಗಿರುವುದಕ್ಕೆ ಭಾರತೀಯ ಸೇನೆಯು ಮುಯ್ಯಿ ತೀರಿಸಿಕೊಂಡಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ (Baramulla Encounter) ಒಳನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ಆ ಮೂಲಕ ಅನಂತನಾಗ್ ಜಿಲ್ಲೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿರುವುದಕ್ಕೆ ಸೇಡು ತೀರಿಸಿಕೊಂಡಿದ್ದಾರೆ. ಹಾಗೆಯೇ, ಇನ್ನೂ ಉಳಿದ ಉಗ್ರರಿಗೆ ಯೋಧರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.
ಬಾರಾಮುಲ್ಲಾ ಜಿಲ್ಲೆಯ ಹತ್ಲಾಂಗ ಹಾಗೂ ಉರಿ ಸೆಕ್ಟರ್‌ಗಳಲ್ಲಿ ಉಗ್ರರು ಭಾರತಕ್ಕೆ ನುಸುಳಲು ಯತ್ನಿಸಿದ್ದಾರೆ. ಇದರ ಕುರಿತು ನಿಖರ ಮಾಹಿತಿ ಪಡೆದ ಯೋಧರು ಹಾಗೂ ಬಾರಾಮುಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಉಗ್ರರು ಭದ್ರತಾ ಸಿಬ್ಬಂದಿ ಮೇಲೆಯೇ ಗುಂಡಿನ ದಾಳಿ ಆರಂಭಿಸಿದ್ದಾರೆ. ಆಗ ತಿರುಗೇಟು ನೀಡಿದ ಭದ್ರತಾ ಸಿಬ್ಬಂದಿಯು ಮೂವರು ಪಾಕಿಸ್ತಾನಿ ಉಗ್ರರನ್ನು ಹತ್ಯೆಗೈದಿದ್ದಾರೆ.
#BaramullaEncounterUpdate: Another #terrorist killed (Total 03). Search #operation in progress. Further details shall follow.@JmuKmrPolice https://t.co/apSo4RhtFp
— Kashmir Zone Police (@KashmirPolice) September 16, 2023
ಮತ್ತೊಂದೆಡೆ, ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸತತ 72 ಗಂಟೆಗಳಿಂದ ಹಗಲು-ರಾತ್ರಿ ಎನ್ನದೆ ಭದ್ರತಾ ಸಿಬ್ಬಂದಿಯು ಕಾಕೆರ್‌ನಾಗ್ ಪ್ರದೇಶದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಒಂದೆಡೆ ದಟ್ಟ ಕಾಡು, ಮತ್ತೊಂದೆಡೆ ಬೆಟ್ಟ-ಗುಡ್ಡ ಇರುವುದರಿಂದ ಕಾರ್ಯಾಚರಣೆಗೆ ಅಡೆತಡೆ ಆಗುತ್ತಿದೆ. ಇಷ್ಟಾದರೂ ಛಲ ಬಿಡದ ಯೋಧರು ಆಪರೇಷನ್ ಮುಂದುವರಿಸಿದ್ದಾರೆ. ಉಗ್ರರ ಪತ್ತೆಗೆ ಡ್ರೋನ್ ಸೇರಿ ಹಲವು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Anantnag Encounter: ಒಂದೆಡೆ ಕಾಡು, ಮತ್ತೊಂದೆಡೆ ಬೆಟ್ಟ; ಕಾಶ್ಮೀರದಲ್ಲಿ ಎನ್‌ಕೌಂಟರ್ ನಡೆಯುತ್ತಿರುವುದು ಹೇಗೆ?
ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಸೇನೆಯ ಕರ್ನಲ್ (Colonel) ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನೌಕ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಹುಮಾಯೂನ್ ಭಟ್ ಅವರು ಹುತಾತ್ಮರಾಗಿದ್ದಾರೆ. ಇವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಸಾವಿರಾರು ಜನ ಭಾವುಕರಾಗಿ ವಿದಾಯ ಹೇಳಿದ್ದಾರೆ. ಮೇಜರ್ ಆಶಿಶ್ ಧೋನೌಕ್ ಅವರ ಅಂತ್ಯಸಂಸ್ಕಾರವು ಹರ್ಯಾಣದ ಪಾಣಿಪತ್‌ನಲ್ಲಿ ನೆರವೇರಿದ್ದು, ಭಾರತ್ ಮಾತಾ ಕೀ ಜೈ ಸೇರಿ ಹಲವು ಘೋಷಣೆಗಳನ್ನು ಕೂಗಿ ವೀರ ಯೋಧನಿಗೆ ಗೌರವ ಸಲ್ಲಿಸಿದ್ದಾರೆ.