Site icon Vistara News

Tilak Award: ಮೋದಿಗೆ ನಾಳೆ ಲೋಕಮಾನ್ಯ ತಿಲಕ್‌ ಪ್ರಶಸ್ತಿ ಪ್ರದಾನ; ಇದುವರೆಗೆ ಈ ಪ್ರಶಸ್ತಿ ಪಡೆದ ನಾಯಕರು ಯಾರ‍್ಯಾರು?

Narendra Modi Indira Gandhi And N R Narayana Murthy

Tilak Award: As Narendra Modi name sparks row, a look at earlier winners

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ (ಆಗಸ್ಟ್‌ 1) ಪುಣೆಯಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ (Tilak Award) ಪ್ರದಾನ ಮಾಡಲಾಗುತ್ತದೆ. ತಿಲಕ ಸ್ಮಾರಕ ಮಂದಿರ ಟ್ರಸ್ಟ್‌ನಿಂದ 41ನೇ ಪ್ರಶಸ್ತಿಯನ್ನು ನರೇಂದ್ರ ಮೋದಿ ಅವರಿಗೆ ನೀಡಲಾಗುತ್ತಿದೆ. ಇನ್ನು ಮೋದಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಣ್ಣ ಆಕ್ಷೇಪ, ಕಾರ್ಯಕ್ರಮದಲ್ಲಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಭಾಗಿಯಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಇದುವರೆಗೆ ಲೋಕಮಾನ್ಯ ತಿಲಕ್ ಪ್ರಶಸ್ತಿಯನ್ನು ಯಾರೆಲ್ಲ ಸ್ವೀಕರಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇದುವರೆಗೆ ಪ್ರಶಸ್ತಿ ಪಡೆದ ನಾಯಕರು ಯಾರು?

ಲೋಕಮಾನ್ಯ ತಿಲಕ ಪ್ರಶಸ್ತಿಯನ್ನು 1983ರಲ್ಲಿ ಸ್ಥಾಪಿಸಲಾಗಿದ್ದು, ಆಗಸ್ಟ್‌ 1ರಂದು ಬಾಲ ಗಂಗಾಧರ ತಿಲಕ್‌ ಅವರ ಪುಣ್ಯಸ್ಮರಣೆಯ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದುವರೆಗೆ ಕಾಂಗ್ರೆಸ್‌ ನಾಯಕರು, ಉದ್ಯಮಿಗಳು ಸೇರಿ ಹಲವರು ಪ್ರಶಸ್ತಿಯನ್ನು ಸ್ವೀಕರಿಸಿರುವುದು ಗಮನಾರ್ಹವಾಗಿದೆ.

ಇದುವರೆಗೆ ಲೋಕಮಾನ್ಯ ತಿಲಕ್ ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿಗಳಾದ ಡಾ.ಶಂಕರ್‌ ದಯಾಳ್‌ ಶರ್ಮಾ, ಪ್ರಣಬ್‌ ಮುಖರ್ಜಿ ಅವರು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ, ಡಾ.ಮನಮೋಹನ್‌ ಸಿಂಗ್‌, ಉದ್ಯಮಿ, ಕನ್ನಡಿಗ ಎನ್.ಆರ್‌.ನಾರಾಯಣ ಮೂರ್ತಿ, ಸೈರಸ್‌ ಪೂನಾವಾಲಾ, ಎಂಜಿನಿಯರ್‌ ಇ. ಶ್ರೀಧರನ್‌ ಸೇರಿ ಹಲವು ಕ್ಷೇತ್ರಗಳ ಗಣ್ಯರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಕಾರ್ಯಕ್ರಮದ ಆಯೋಜಕ ಕಾಂಗ್ರೆಸ್‌ ಲೀಡರ್‌

ಕಾರ್ಯಕ್ರಮದ ಆಯೋಜಕರಾಗಿರುವ ರೋಹಿತ್‌ ತಿಲಕ್‌ ಅವರು ಕಾಂಗ್ರೆಸ್‌ ನಾಯಕರಾಗಿದ್ದಾರೆ. ಇವರು ಬಾಲಗಂಗಾಧರ ತಿಲಕ್‌ ಅವರ ಮರಿಮೊಮ್ಮಗ ಆಗಿದ್ದು, ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆದರೆ, ಮೋದಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದನ್ನು ವಿರೋಧಿಸಿ ಪುಣೆಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಕೂಡ ಇರುವ ಮಹಾ ವಿಕಾಸ್‌ ಅಘಾಡಿ ಯೋಜನೆ ರೂಪಿಸಿದೆ.

ನರೇಂದ್ರ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ನೀಡುತ್ತಿರುವುದನ್ನು ರೋಹಿತ್‌ ತಿಲಕ್‌ ಸಮರ್ಥಿಸಿಕೊಂಡಿದ್ದಾರೆ. “ಮೊದಲೇ ಹೇಳಿದಂತೆ, ಇದು ರಾಜಕೀಯೇತರ ಕಾರ್ಯಕ್ರಮ. ನನಗೆ ಯಾರು ಪ್ರತಿಭಟನೆ ನಡೆಸುತ್ತಾರೆ ಎಂಬುದು ಗೊತ್ತಿಲ್ಲ. ಸ್ವದೇಶಿ ಹಾಗೂ ರಾಷ್ಟ್ರೀಯ ಶಿಕ್ಷಣ ಎಂಬುದು ಬಾಲಗಂಗಾಧರ ತಿಲಕ್‌ ಅವರ ಗುರಿಯಾಗಿತ್ತು. ಅವರ ತತ್ವಗಳಂತೆ ನರೇಂದ್ರ ಮೋದಿ ಅವರು ಆಡಳಿತ ನಡೆಸುತ್ತಿದ್ದಾರೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಶರದ್‌ ಪವಾರ್‌ ಮುಖ್ಯ ಅತಿಥಿ; ‘ಇಂಡಿಯಾ’ದಲ್ಲಿ ಭುಗಿಲೆದ್ದ ಅಸಮಾಧಾನ

ಶರದ್‌ ಪವಾರ್‌ ಭಾಗಿ?

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ಭಾಗವಹಿಸಲಿದ್ದಾರೆ ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ. ಶರದ್‌ ಪವಾರ್‌ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಜತೆಗೆ, ಅವರೇ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಶರದ್‌ ಪವಾರ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಇಂಡಿಯಾ ಒಕ್ಕೂಟದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Exit mobile version